ಮಂಗಳೂರು: ಬಾಯಿ ಕ್ಯಾನ್ಸರ್ ಬಂದಾಗ ಸಕಾಲದಲ್ಲಿ ಚಿಕಿತ್ಸೆ ನೀಡಿದರೆ ಸಂಪೂರ್ಣ ಗುಣಪಡಿಸಬಹುದು ಎಂದು ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕ ಡಾ. ಮುರಲೀ ಮೋಹನ್ ಚೂಂತಾರು ಹೇಳಿದರು.
ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಮತ್ತು ಸುರಕ್ಷಾ ದಂತ ಚಿಕಿತ್ಸಾಲಯದ ಜಂಟಿ ಆಶ್ರಯದಲ್ಲಿ ಮಂಗಳವಾರ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಬಾಯಿ ಕ್ಯಾನ್ಸರ್ ಮಾಹಿತಿ ಮತ್ತು ತಪಾಸಣಾ ಶಿಬಿರ ಜರುಗಿತು.
ಹೆಚ್ಚಿನ ಎಲ್ಲಾ ಬಾಯಿ ಕ್ಯಾನ್ಸರ್ ಗಳು ತಡೆಗಟ್ಟಬಹುದಾದ ರೋಗವಾಗಿದ್ದು, ತಂಬಾಕು ಉತ್ಪನ್ನಗಳನ್ನು ಬಳಸದೇ ಇದ್ದಲ್ಲಿ ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 90 ರಷ್ಟು ಕ್ಷೀಣಿಸುತ್ತದೆ. ಒಂದು ವೇಳೆ ಬಾಯಿ ಕ್ಯಾನ್ಸರ್ ಬಂದರೂ ಸ್ಟೇಜ್ ಒಂದು ಮತ್ತು ಸ್ಟೇಜ್ ಎರಡರಲ್ಲಿ ಗುರುತಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ತಡೆಗಟ್ಟಬಹುದಾದ ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೋಗವಾಗಿದೆ ಎಂದರು.
ದಂತವೈದ್ಯೆ ಡಾ. ರಾಜಶ್ರೀ ಮೋಹನ್, ದಂತ ಪರಿಚಾರಿಕೆಯರಾದ ರಮ್ಯಾ,ಚೈತ್ರ,ಸುಶ್ಮಿತಾ ಜಯಶ್ರೀ ಮುಂತಾದವರು ಉಪಸ್ಥಿತರಿದ್ದರು. ಸುಮಾರು 50 ಮಂದಿ ರೋಗಿಗಳು ಈ ಶಿಬಿರದ ಪ್ರಯೋಜನ ಪಡೆದರು. ಡಾ.ಮುರಲೀ ಮೋಹನ್ ಚೂಂತಾರು ಅವರು ಬರೆದ ಅರಿವು ಬಾಯಿ ಕ್ಯಾನ್ಸರ್ ಮಾರ್ಗದರ್ಶನ ಪುಸ್ತಕ ಮತ್ತು ಬಾಯಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಕರ ಪತ್ರವನ್ನು ಹಂಚಲಾಯಿತು.