ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಮೂರು ದಶಕಗಳ ಮೆರುಗು - ಡಿ.10ರಿಂದ 15ರ ತನಕ 30ನೇ ವರ್ಷದ ಆಳ್ವಾಸ್ ವಿರಾಸತ್ -  ಪಂ. ವೆಂಕಟೇಶ್ ಕುಮಾರ್‌ಗೆ ಪ್ರಶಸ್ತಿ ಪ್ರದಾನ -ಮೇಳಗಳ ಮಹಾ ಅನಾವರಣ

Alvas
Published on

ಮಂಗಳೂರು : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗುವ ‘ಆಳ್ವಾಸ್ ವಿರಾಸತ್’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಡಿ.10ರಿಂದ 15ರವರೆಗೆ ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.

2024ನೆ ಸಾಲಿನ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್‌ರಿಗೆ ಪ್ರದಾನ ಮಾಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

30ನೇ ವರ್ಷದ ಆಳ್ವಾಸ್ ವಿರಾಸತ್‌ನಲ್ಲಿ ಈ ವರ್ಷ ವಿಶೇಷ ಆಕರ್ಷಣೆಯಾಗಿ, ಕೈಮಗ್ಗ ಸೀರೆಗಳ ಉತ್ಸವವನ್ನು ಆಯೋಜಿಸಲಾಗಿದೆ. ಭಾರತದ 30 ಪ್ರದೇಶವಾರು ಹಾಗೂ ಜಿಐ ಟ್ಯಾಗ್ ಹೊಂದಿರುವ ಕೈಮಗ್ಗ ಸೀರೆಗಳ ಹಾಗೂ ಬಟ್ಟೆಗಳ ಉತ್ಸವ ವಿರಾಸತ್‌ನಲ್ಲಿರಲಿದೆ. ಉಡುಪಿಯ ಪದ್ಮಶಾಲಿ ನೇಕಾರರ ಪ್ರತಿಷ್ಠಾನದ ಸಹಕಾರದೊಂದಿಗೆ ಈ ಉತ್ಸವ ಆಯೋಜಿಸಲಾಗಿದೆ ಎಂದರು.

ಡಾ.ವೀರೇಂದ್ರ ಹೆಗ್ಗಡೆ ಉದ್ಘಾಟನೆ

ಡಿ. 10ರ ಸಂಜೆ 5.30ರಿಂದ 6.30ರವರೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟನೆ ನೆರವೇರಿಸುವರು. ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಿ. ಶಂಕರ್ ಅಧ್ಯಕ್ಷತೆ ವಹಿಸುವರು ಎಂದು ಅವರು ಹೇಳಿದರು.

ಸಂಜೆ 6.35ರಿಂದ 8.30ರವರೆಗೆ 100ಕ್ಕೂ ಅಧಿಕ ದೇಶಿಯ ಜಾನಪದ ಕಲಾ ತಂಡಗಳಿಂದ ಕೂಡಿದ 3000ಕ್ಕೂ ಅಧಿಕ ಕಲಾವಿದರನ್ನು ಒಳಗೊಂಡ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ರಾತ್ರಿ 8.30ರಿಂದ 9.30ರವರೆಗೆ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ರಥ ಸಂಚಲನ ಹಾಗೂ ರಥಾರತಿ ನಡೆಯಲಿದೆ.

ಡಿ. 11ರಂದು ಸಂಜೆ 5.45ರಿಂದ 6.30ರವರೆಗೆ ಆಳ್ವಾಸ್ ವಿರಾಸತ್ 2024 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 6.35ರಿಂದ 7.30ರವರೆಗೆ ಹಿಂದೂಸ್ಥಾನಿ ಗಾಯನ, ಬಳಿಕ 7.45ರಿಂದ 9ರವರೆಗೆ ಗುಜರಾತ್‌ನ ರಂಗ್ ಮಲಹರ್ ದಿ. ಫೋಕ್ ಆರ್ಟ್ಸ್ ತಂಡದಿಂದ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ನಡೆಯಲಿದೆ. 9 ಗಂಟೆಯಿಂದ ಆಳ್ವಾಸ್ ವೈವಿಧ್ಯಮಯ ಸಾಂಸ್ಕೃತಿಕ ವೈಭವ ನಡೆಯಲಿದೆ.

ಡಿ. 12ರಂದು ಸಂಜೆ 6ರಿಂದ 8ರವರೆಗೆ ಗುಜರಾತ್‌ನ ಒಸ್ಮಾನ್ ಮೀರ್ ಮತ್ತು ಬಳಗದಿಂದ ಸಂಗೀತ ಲಹರಿ ಹಾಗೂ ರಾತ್ರಿ 8.15ರಿಂದ ನೃತ್ಯ ವೈವಿಧ್ಯ ನಡೆಯಲಿದೆ. ರಾತ್ರಿ 9.15ರಿಂದ ಆಳ್ವಾಸ್ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಪ್ರಸ್ತುತಗೊಳ್ಳಲಿದೆ.

ಡಿ.13ರಂದು ಸಂಜೆ 6ರಿಂದ 8ರವರೆಗೆ ನೀಲಾದ್ರಿ ಕುಮಾರ್ ಮತ್ತು ತಂಡದಿಂದ ‘ಸೌಂಡ್ ಆಫ್ ಇಂಡಿಯಾ’ ಹಾಗೂ 8.15ರಿಂದ 9ರವರೆಗೆ ಕೋಲ್ಕತ್ತಾದ ಆಶೀಮ್ ಬಂಧು ಭಟ್ಟಾಚಾರ್ಜಿ ಸಂಯೋಜನೆಯಲ್ಲಿ ಭರತನಾಟ್ಯ, ಒಡಿಸ್ಸಿ, ಕಥಕ್ ಸಂಗಮದ ತ್ರಿಪರ್ಣ ಪ್ರಸ್ತುತಗೊಳ್ಳಲಿದೆ. ರಾತ್ರಿ 9ರಿಂದ ಬೆಂಗಳೂರು ಕಾರ್ತೀಸ್ ಫರ್‌ಫಾರ್ಮಿಂಗ್ ಆರ್ಟ್ಸ್ ನೃತ್ಯೋಲ್ಲಾಸ ಹಾಗೂ ಬೆಂಗಳೂರು ರಾಜರಾಜೇಶ್ವರಿ ಕಲಾನಿಕೇತನದಿಂದ ಕೂಚುಪುಡಿ ನೃತ್ಯ ಹಾಗೂ 9.15ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ. ಡಿ. 14ರಂದು ಸಂಜೆ 6ರಿಂದ 9ರವರೆಗೆ ಚೆನ್ನೈನ ಸ್ಟೆಕೇಟೋದ 25 ಕಲಾವಿದರಿಂದ ಸಂಗೀತ ರಸದೌತಣ ಹಾಗೂ ರಾತ್ರಿ 9ಕ್ಕೆ ಸಾಂಸ್ಕೃತಿಕ ರಥ ಸ್ವಸ್ಥಾನ ಗಮನದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.

ಡಿ. 15ರಂದು ಕೃಷಿ, ಆಹಾರ, ಫಲಪುಷ್ಪ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ, ಚಿತ್ರಕಲೆ, ಕಲಾಕೃತಿ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮೇಳ ದಿನಪೂರ್ತಿ ತೆರೆದಿರುತ್ತದೆ. ಪ್ರತಿನಿತ್ಯ ಅಂದಾಜು ತಲಾ 1 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ.

ರಾಜ್ಯ ಮಟ್ಟದ ಸ್ಕೌಟ್ಸ್-ಗೈಡ್ಸ್ ಸಾಂಸ್ಕೃತಿಕ ಉತ್ಸವ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿ ಶಿಬಿರ 5 ದಿನಗಳ ಕಾಲ ನಡೆಯಲಿದೆ. ದೇಶಪ್ರೇಮ, ದೇಶೀಯತೆ, ದೇಶೀಯ ಕಲೆಗಳ ಅನಾವರಣ, ಪರಿಸರ ಪ್ರಜ್ಞೆ, ಸಾಹಸ ಕ್ರೀಡೆಗಳು, ಸೌಹಾರ್ದತೆ ಸಾಮರಸ್ಯ ಬದುಕಿನ ತಿಳುವಳಿಕೆ, ಸೌಂದರ್ಯ ಪ್ರಜ್ಞೆ, ಕೃಷಿಯ ಪರಿಚಯ,ಶಿಸ್ತು, ಸಮಯ ಪ್ರಜ್ಞೆ, ಯೋಗ, ಪ್ರಾಣಾಯಾಮ, ಸೇವಾ ಮನೋಭಾವನೆ ಮೊದಲಾದ ವಿಚಾರಗಳಲ್ಲಿ ಅರ್ಥಪೂರ್ಣ ತರಬೇತಿ ನೀಡಲಾಗುವುದು ಎಂದು ಡಾ.ಎಂ. ಮೋಹನ್ ಆಳ್ವ ತಿಳಿಸಿದರು.

ಗೋಷ್ಠಿಯಲ್ಲಿ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಇಂಡಿಯನ್ ಆರ್ಟಿಸಾನ್ ಬಜಾರ್

ಈ ಬಾರಿಯ ವಿರಾಸತ್‌ನಲ್ಲಿ ಕೃಷಿ, ಆಹಾರ, ಫಲಪುಷ್ಪ ಸೇರಿದಂತೆ ವಿವಿಧ ಮೇಳಗಳು ನಡೆಯಲಿವೆ. ಕಲೆ ಮತ್ತು ಕರಕುಶಲ ವಸ್ತುಗಳು, ಉಡುಪುಗಳು, ಆಭರಣಗಳು, ಗೃಹಾಲಂಕಾರಿಕ ವಸ್ತುಗಳು, ಅಪರೂಪದ ಹಾಗೂ ಸಮಕಾಲೀನ ವಸ್ತುಗಳ ಬಜಾರ್ ಇರಲಿದೆ. ದೇಶದ ವಿವಿಧ ಭಾಗದಲ್ಲಿ ತಯಾರಾದ ವೈವಿಧ್ಯಮಯ ಕರಕುಶಲ ವಸ್ತುಗಳು, ಆಯಾ ರಾಜ್ಯಗಳ ಕರಕುಶಲ ಕರ್ಮಿಗಳಿಂದ ನೇರ ಮಾರಾಟ ನಡೆಯಲಿದೆ. ಬೆಂಗಳೂರು ಆರ್ಟ್ಸ್ ಮತ್ತು ಕ್ರಾಫ್ಟ್ ಮೇಳ ಹಾಗೂ ದೆಹಲಿಯ ಮೀನಾ ಬಜಾರ್ ಮೇಳಗಳಂತೆ ನಡೆಯಲಿದೆ ಎಂದು ಡಾ.ಮೋಹನ್ ಆಳ್ವ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net