

ಮಂಗಳೂರು: ದೇಶದ ಅತ್ಯಂತ ದೊಡ್ಡ ಹಬ್ಭ ಗಣೇಶ ಚತುರ್ಥಿ ಆಚರಣೆಗೆ ರಾಜ್ಯ ಸರ್ಕಾರದ ನೀತಿಗಳು ಜನರಲ್ಲಿ ಗೊಂದಲ ಉಂಟು ಮಾಡಿದೆ. ತಕ್ಷಣ ಹಿಂದೂ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡುವಂತೆ ಸರ್ಕಾರವನ್ನು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರದ ಅನೇಕ ಕಡೆ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ಕೋರಲು ಹೋಗಿರುವ ಆಯೋಜಕರಿಗೆ ನೀತಿ ನಿಯಮಗಳನ್ನು ಹೇರುವ ಮೂಲಕ ಗೊಂದಲ ಸೃಷ್ಟಿಸಿ, ಹಿಂದೂ ಬಾಂಧವರು ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಿಸುವುದನ್ನೇ ನಿಲ್ಲಿಸಬೇಕು ಎನ್ನುವ ವ್ಯವಸ್ಥಿತ ಹುನ್ನಾರವನ್ನು ರಾಜ್ಯ ಸರ್ಕಾರ ನಡೆಸುತ್ತಿದೆ. ವಿಘ್ನ ವಿನಾಯಕ ಇಡೀ ಬ್ರಹ್ಮಾಂಡದಲ್ಲೇ ತುಂಬಿಕೊಂಡಿದ್ದಾನೆ. ವೈಯಕ್ತಿಕ, ಸಾರ್ವಜನಿಕ, ಸರ್ಕಾರ ಹೀಗೆ ಯಾವುದೇ ಶುಭ ಕಾರ್ಯಗಳಲ್ಲೂ ಅವನಿಗೇ ಮೊದಲ ಪೂಜೆ. ಅಂತಹ ಪೂಜೆಗೆ ಇನ್ನಿಲ್ಲದ ಅಡೆತಡೆಗಳನ್ನು ಒಡ್ದುವ ಪ್ರಯತ್ನವೇಕೆ? ಎಂದವರು ಪ್ರಶ್ನಿಸಿದರು.
ಸಂಚಾರ ವ್ಯವಸ್ಥೆಯಲ್ಲಿ ಗೊಂದಲ: ಯಾವುದೇ ಮಾಹಿತಿ ನೀಡದೆ ನಗರದಲ್ಲಿ ಧಿಡೀರ್ ಸಂಚಾರ ಬದಲಾವಣೆ ಮಾಡಿದ ಪರಿಣಾಮ ಸಾರ್ವಜನಿಕರು ಪರದಾಡುವಂತಾಗಿದೆ. ಲೇಡಿಗೋಷನ್ ಆಸ್ಪತ್ರೆಯ ಬಳಿ ಇರುವ ಬಸ್ ನಿಲ್ದಾಣ ಹಾಗೂ ಬಸ್ ಗಳ ಮಧ್ಯದಲ್ಲೇ ಬ್ಯಾರಿಕೇಡ್ ಬಂದಿದೆ. ಆದ್ದರಿಂದ ಪ್ರಯಾಣಿಕರು ರಸ್ತೆಯ ಒಂದು ಬದಿಯನ್ನು ಅಪಾಯಕಾರಿಯಾಗಿ ದಾಟಿ ಓಡಿ ಬಂದು ಬ್ಯಾರಿಕೇಡ್ ಸರಿಸಿ ಬಸ್ ಹತ್ತುತ್ತಿರುವ ದೃಶ್ಯ ಕಂಡು ಬರುತ್ತಿದೆ. ಇಲ್ಲಿ ದುರದೃಷ್ಟವಶಾತ್ ಒಬ್ಬ ನಾಗರಿಕನ ಅಮೂಲ್ಯ ಜೀವಕ್ಕೆ ಹಾನಿಯಾದರೂ ಅದರ ನೇರ ಹೊಣೆಯನ್ನು ಇಂತಹ ಅವೈಜ್ಞಾನಿಕ ನಿಯಮ ರೂಪಿಸಿದವರೇ ಹೊರಬೇಕು ಎಂದು ಶಾಸಕರು ಹೇಳಿದರು.
ಜಿಲ್ಲೆಯ ಕಾಂಗ್ರೆಸ್ ನಾಯಕರ ಒತ್ತಡ, ಸಚಿವರ ಮೌಖಿಕ ಆದೇಶವೆಂದು ಏಕಾಏಕಿ ವಾಸ್ತವವನ್ನೇ ಅರಿಯದೇ ಸಂಚಾರ ಬದಲಾವಣೆ ಮಾಡುವ ಮೊದಲು ಕ್ಷೇತ್ರದ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯುವ ಸೌಜನ್ಯವೂ ಇಲ್ಲವೇ? ಹಲವಾರು ಕಡೆಗಳಲ್ಲಿ ಯೂ-ಟರ್ನ್, ಡಿವೈಡರ್ ಬಂದ್ ಮಾಡಲಾಗಿದೆ. ನಮಗಂತೂ ಈ ಬಗ್ಗೆ ಯಾವುದೇ ಮಾಹಿತಿಯೇ ಇಲ್ಲ. ಕೊನೆಪಕ್ಷ ದಿನನಿತ್ಯ ಇಲ್ಲೇ ಸಂಚರಿಸುವ ಸಾರ್ವಜನಿಕರಿಗಾದರೂ ತಿಳಿಸಬೇಡವೇ ಎಂದವರು ಪ್ರಶ್ನಿಸಿದರು.
ಹಂಪನಕಟ್ಟೆ ಬಸ್ ನಿಲ್ದಾಣ ತೆರವು: ಹಂಪನಕಟ್ಟೆಯ ವಿ.ವಿ. ಕಾಲೇಜು ಮುಂಭಾಗದಲ್ಲಿದ್ದ ಬಸ್ ನಿಲ್ದಾಣವನ್ನು ಕೇವಲ ಒಬ್ಬ ವ್ಯಕ್ತಿಯ ಅಂಗಡಿಯ ವ್ಯಾಪಾರದ ಉದ್ದೇಶಕ್ಕಾಗಿ ಯಾರಿಗೂ ಮಾಹಿತಿ ನೀಡದೇ ರಾತೋರಾತ್ರಿ ತೆರವು ಮಾಡಿದ ಪರಿಣಾಮ ಕಾಲೇಜು ವಿದ್ಯಾರ್ಥಿಗಳು, ವೆನ್ಲಾಕ್ ಆಸ್ಪತ್ರೆಗೆ ಬರುವವರು ಸೇರಿದಂತೆ ಸಾವಿರಾರು ಜನರು ಬಿಸಿಲು, ಮಳೆಯಲ್ಲಿ ನಿಲ್ಲುವಂತಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಜನಾಭಿಪ್ರಾಯದಂತೆ ಅದೇ ಜಾಗದಲ್ಲಿ ಮತ್ತೆ ಬಸ್ ನಿಲ್ದಾಣ ಮರು ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದರು.
ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ: ರಾಜ್ಯ ಸರ್ಕಾರವು ಮಾರ್ಗಸೂಚಿ ದರವನ್ನು ಅವೈಜ್ಞಾನಿಕವಾಗಿ ಹೆಚ್ಚಿಸಿದ ಪರಿಣಾಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು ಇದು ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಬಗ್ಗೆ ನಗರ ವಾಸಿಗಳಲ್ಲಿ ನಕಾರಾತ್ಮಕ ಭಾವನೆ ಮೂಡಿಸುವ ಪ್ರಯತ್ನವಾಗಿದೆ. ಸರ್ಕಾರ ಆಸ್ತಿ ತೆರಿಗೆ ಹೆಚ್ಚಳದ ಆದೇಶವನ್ನು ಕೂಡಲೇ ಹಿಂಪಡೆದು ನಗರದ ಜನಸಾಮಾನ್ಯರಿಗೆ ಹೊರೆಯಾಗುವುದನ್ನು ತಪ್ಪಿಸಿ ನ್ಯಾಯ ಕೊಡಿಸುವ ಕೆಲಸ ಮಾಡಬೇಕು.
ರಾಜ್ಯದ ಬಂದರು ಇಲಾಖೆಯಲ್ಲಿನ ಸರ್ಕಾರಿ ಜಾಗವನ್ನು ಹಲವಾರು ವರ್ಷಗಳಿಂದ ನಿಗದಿತ ದರದಲ್ಲಿ ಬಾಡಿಗೆಗೆ ಹಾಗೂ ಲೀಸ್ ಗೆ ನೀಡಲಾಗಿದೆ. ಇದೀಗ ಆ ದರವು ಹೆಚ್ಚಾಗಿದ್ದು ಈ ಕೂಡಲೇ ಕಡಿಮೆ ಮಾಡಬೇಕು ಎಂದು ಸರ್ಕಾರವನ್ನು ಶಾಸಕರು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಡಲದ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಸಂಜಯ್ ಪ್ರಭು, ಪ್ರಮುಖರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್ ಉಪಸ್ಥಿತರಿದ್ದರು.