

ಮಂಗಳೂರು : ಬಜ್ಪೆಯ 13ರ ಹರೆಯದ ಬಾಲಕ ಥೈಲ್ಯಾಂಡಿನಲ್ಲಿ ನಡೆದ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಫ್ಯಾಷನ್, ಮಾಡೆಲಿಂಗ್ ಹಾಗೂ ಪ್ರತಿಭಾ ಪ್ರದರ್ಶನವನ್ನು ಒಳಗೊಂಡಿರುತ್ತದೆ ಎಂದು ತರಬೇತುದಾರ ವಿಜೇ ಡಿಕ್ಸನ್ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆಗಸ್ಟ್ 7ರಿಂದ 10ರವರೆಗೆ ಥೈಲ್ಯಾಂಡ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ, ಅಮೇರಿಕಾ, ಲೆಬನಾನ್, ಅರ್ಮೇನಿಯಾ, ಯುಎಇ, ಓಮನ್, ಥೈಲ್ಯಾಂಡ್, ಮಲೇಶಿಯಾ, ಶ್ರೀಲಂಕಾ, ಇಂಡೋನೇಷ್ಯಾ, ವಿಯೆಟ್ನಾಂ, ನೇಪಾಳ ಸೇರಿದಂತೆ ಹಲವಾರು ದೇಶಗಳಿಂದ ಭಾಗವಹಿಸಿದ ಸ್ಪರ್ಧಿಗಳು ಭಾಗವಹಿಸಿದ್ದರು.
'
ಕ್ಯಾಲಿಕಟ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಗಳಿಸಿ ವರುಣ್ ಭಾರತವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಿ ಜಯಗಳಿಸಿದ್ದಾರೆ ಎಂದರು.
ಬಜ್ಪೆ ಸೇಂಟ್ ಜೋಸೆಫ್ ಹೈಸ್ಕೂಲ್‌ನ 8ನೇ ತರಗತಿಯ ವಿದ್ಯಾರ್ಥಿಯಾಗಿರುವ ವರುಣ್ ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ ಮತ್ತು ಜಾಹೀರಾತು ಶೂಟುಗಳಲ್ಲಿ ಭಾಗವಹಿಸುತ್ತಿದ್ದಾರೆ. ಈತ ಲಿಡ್ವಿನ್ ಡಿಕೋಸ್ಟಾ ಮತ್ತು ವಿನ್ಸೆಂಟ್ ಡಿಕೋಸ್ಟಾ ದಂಪತಿ ಪುತ್ರ.
ವರುಣ್ ಅವರಿಗೆ ಮಂಗಳೂರಿನ ಸಾಕಷ್ಟು ನೃತ್ಯ, ಪ್ಯಾಶನ್ ಕ್ಷೇತ್ರದ ಪ್ರಮುಖರು ತರಬೇತಿ ನೀಡಿದ್ದು, ಡಿಸೈನರ್ ಉಡುಪುಗಳನ್ನು ಹೇರಾ ಪಿಂಟೋ ಕೂಟ್ಯೂರ್ ವಿನ್ಯಾಸಗೊಳಿಸಿದರು. ಕಳೆದ ವರ್ಷ ಮಿಸ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿ ಮಂಗಳೂರಿನ ಯಶಸ್ವಿನಿ ದೇವಾಡಿಗ ಅವರು ಗೆದ್ದಿದ್ದರು ಎಂದು ಅವರು ವಿವರಿಸಿದರು.
ಮುಂದೆ ಮಿಸ್ಟರ್ ಇಂಡಿಯಾ ಆಗಬೇಕೆಂಬ ಆಸೆಯಿದ್ದು, ಇಂಡಿಯನ್ ಬೆಸ್ಟ್ ಡ್ಯಾನ್ಸರ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಶೋಗಳಲ್ಲಿ ಭಾಗವಹಿಸುವ ಇಚ್ಚೆ ಇದೆ ಎಂದು ವರುಣ್ ಡಿಕೋಸ್ಟಾ ಹೇಳಿದರು.
ವರುಣ್ ತಾಯಿ ಲಿಡ್ವಿನ್ ಡಿಕೋಸ್ಟಾ, ವಿನಾಲ್ ಡಿಕೋಸ್ಟಾ ಉಪಸ್ಥಿತರಿದ್ದರು.'