

ಮಂಗಳೂರು: ಮಂಜಲ್‌ಪಾದೆಯ ಲ್ಗುಣಿ ನದಿ ತೀರದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದವರ ಪೈಕಿ ಇಬ್ಬರನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಲಾರಾ ಡಿಸೋಜ (28) ಮತ್ತು ತಿಯಾದೋರ್ ಡಿಸೋಜ (56) ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಬುಧವಾರ ರಾತ್ರಿ 10.45ರ ವೇಳೆಗೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಅಲ್ಲಿ ಮರಳು ತುಂಬಿದ ಎರಡು ಲಾರಿ ಕಂಡು ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಒಂದು ಲಾರಿಯನ್ನು ಚಾಲಕ ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ನದಿಯಿಂದ ಮರಳು ತೆಗೆಯುತ್ತಿದ್ದವರು ಅಲ್ಲಿಂದ ಓಡಿ ಹೋಗಿದ್ದು, ಆ ಪೈಕಿ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮರಳು ತುಂಬಿದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ವಿಚಾರಣೆ ವೇಳೆ ಮರಳಿನಿಂದ ಅಕ್ರಮವಾಗಿ ತೆಗೆದು ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.