ಕುಂಬ್ಳೆ ಸುಂದರ ರಾವ್ ಸರ್ವ ಕ್ಷೇತ್ರದ ಸಾಧಕ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಬಣ್ಣನೆ

mng-dec14-AWARD
Published on

ಮಂಗಳೂರು: ಕುಂಬಳೆ ಸುಂದರ ರಾವ್ ಅವರು ಯಕ್ಷಗಾನ, ಧಾರ್ಮಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಸರ್ವ ಕ್ಷೇತ್ರದ ಸಾಧಕರಾಗಿದ್ದರು ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.

ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಮತ್ತು ಕೀರ್ತಿಶೇಷ ಕುಂಬ್ಳೆ ಸುಂದರ ರಾವ್ ಸಂಸ್ಮರಣ ವೇದಿಕೆ ಜಂಟಿಯಾಗಿ ನಗರದ ಕೆನರಾ ಪದವಿ ಪೂರ್ವ ಕಾಲೇಜಿನ ತೆರೆದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ ಕುಂಬ್ಳೆ ಸುಂದರ ರಾವ್ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಂಬ್ಳೆ ಅವರು ಸಾಹಿತಿ, ವಿದ್ವಾಂಸ, ಕಲಾವಿದರು. ಅವರ ಮಾತುಗಾರಿಕೆಯಲ್ಲಿ ಸಾಹಿತ್ಯಿಕ ಅಂಶ ಅಡಗಿತ್ತು. ತಾಳಮದ್ದಳೆಯಲ್ಲಿ ಅವರ ಮಾತುಗಾರಿಕೆ ಅಸಾಧಾರಣ. ಹವ್ಯಾಸಿ, ವೃತ್ತಿ ಕಲಾವಿದರೊಂದಿಗೆ ಒಡನಾಟ ಹೊಂದಿದ್ದ ಅವರು ಸಾಮಾಜಿಕ ಜೀವನದಲ್ಲಿ ಸರಳ ವ್ಯಕ್ತಿತ್ವ. ಅವರ ಪಾತ್ರದಲ್ಲಿ ಸಮಾಜಕ್ಕೆ ಸಂದೇಶ ನೀಡುವ ಅಂಶ ಅಡಗಿತ್ತು. ಯುವಕರಿಗೆ ಪ್ರೇರಣಾದಾಯಕ ವ್ಯಕ್ತಿತ್ವ ಹೊಂದಿದ್ದ ಅವರು ಯಕ್ಷಗಾನದ ಎಲ್ಲಾ ಪ್ರಾಕಾರಗಳಲ್ಲಿ ತೊಡಗಿಸಿ, ಕುಂಬ್ಳೆ ತನವನ್ನು ಎತ್ತಿ ತೋರಿಸಿದ್ದಾರೆ ಎಂದರು.

ಕುಂಬ್ಳೆ ಸುಂದರ ರಾವ್ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಮಾತನಾಡಿ, ಕುಂಬ್ಳೆ ಮತ್ತು ನಾನು ಹಳೇ ಕಾಲದ ಒಡನಾಡಿಗಳು. ಅವರಿಂದಲೇ ನನಗೆ ಸಂಘದ ಮತ್ತು ಸಾಂಸ್ಕೃತಿಕ ಒಡನಾಟ ಸಿಕ್ಕಿತ್ತು ಎಂದು ಹೇಳಿದರು.

ಹಿರಿಯ ಸಾಹಿತಿ ಡಾ.ನಾ. ದಾಮೋದರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಗರಿ ಎಂಟರ್‌ಪ್ರೈಸಸ್ ಮಾಲಕ ಅಗರಿ ರಾಘವೇಂದ್ರ ರಾವ್, ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಕುಂಬ್ಳೆ ಸುಂದರ ರಾವ್ ಕುಟುಂಸ್ಥರು ಇದ್ದರು.

ಕೆನರಾ ಪದವಿ ಪೂರ್ವ ಕಾಲೇಜು ಡೀನ್ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಕರುಣಾಕರ ಬಳ್ಕೂರು ಸನ್ಮಾನಪತ್ರ ವಾಚಿಸಿದರು. ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ಶಶಿರಾಜ್ ಕಾವೂರು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಹಿರಿಯ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಸುಧನ್ವ ಮೋಕ್ಷ ಎಂಬ ತಾಳಮದ್ದಲೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net