

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ.3ರಿಂದ 14ರ ತನಕ ನಡೆಯಲಿರುವ ಮಂಗಳೂರು ದಸರಾ ಮಹೋತ್ಸವ ಆರಂಭಗೊಂಡಿದ್ದು, ಗುರುವಾರ ಶಾರದೆ, ಗಣಪತಿ ಹಾಗೂ ನವದುರ್ಗೆಯರ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.
ದೇವಸ್ಥಾನದ ನವೀಕರಣದ ರುವಾರಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಬೆಳಗ್ಗೆ ಗುರು ಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ, ಕಲಶ ಪ್ರತಿಷ್ಠಾಪನೆ, ನವದುರ್ಗೆ ಮತ್ತು ಶಾರದಾ ಪ್ರತಿಷ್ಠಾಪನೆ, ಭಜನೆ, ಶ್ರೀದೇವಿ ಪುಷ್ಪಾಲಂಕಾರ ಮಹಾಪೂಜೆ ಉತ್ಸವ ನಡೆಯಿತು. ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ಧಿದಾತ್ರಿ, ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ, ಆದಿಶಕ್ತಿ, ಶೈಲಪುತ್ರಿ, ಗಣೇಶ, ಶಾರದಾ ಮಾತೆ ವಿಗ್ರಹಗಳನ್ನು ದರ್ಬಾರ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭ ಹುಲಿ ವೇಷಧಾರಿಗಳಿಂದ ಕುಣಿತ ಸೇವೆ ನಡೆಯಿತು. 9 ತಿಂಗಳ ಮಗು ಹುಲಿ ವೇಷದಲ್ಲಿ ಕಂಗೊಳಿಸಿತು.
ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಲತಿ ಜೆ.ಪೂಜಾರಿ, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್., ಸದಸ್ಯರಾದ ರವಿಶಂಕರ್ ಮಿಜಾರ್, ಎಂ.ಶೇಖರ ಪೂಜಾರಿ, ಸಂತೋಷ್ ಕುಮಾರ್ ಜೆ., ಜಗದೀಪ್ ಡಿ.ಸುವರ್ಣ, ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಉಪಾಧ್ಯಕ್ಷೆ ಡಾ.ಅನಸೂಯ ಬಿ.ಟಿ.ಸಾಲ್ಯಾನ್, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಅಭಿವೃದ್ಧಿ ಸಮಿತಿ ಸದಸ್ಯರಾದ ವೇದಕುಮಾರ್, ಹರಿಕೃಷ್ಣ ಬಂಟ್ವಾಳ್, ರಾಧಾಕೃಷ್ಣ, ಎಚ್.ಎಸ್., ಜೈರಾಜ್, ಕೃತಿನ್ ಡಿ.ಅಮೀನ್, ಜತಿನ್ ಅತ್ತಾವರ, ಎನ್.ಹರೀಶ್ಚಂದ್ರ, ಚಂದನ್ದಾಸ್, ಕಿಶೋರ್ ದಂಡೆಕೇರಿ, ಲೀಲಾಕ್ಷ ಕರ್ಕೇರ, ಗೌರವಿ ರಾಜಶೇಖರ್, ಲತೀಶ್ ಎಂ.ಸುವರ್ಣ, ವಾಸುದೇವ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಮಹೋತ್ಸವಕ್ಕೆ ಭೇಟಿ: ಮಂಗಳೂರು ದಸರಾ ಮಹೋತ್ಸವಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ, ಕಾರ್ಪೋರೇಟರ್ ಪ್ರವೀಣ್ಚಂದ್ರ ಆಳ್ವ, ಅನಿಲ್ ಪೂಜಾರಿ, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು, ರಾಜು ಪೂಜಾರಿ ಭೇಟಿ ನೀಡಿದರು.
ಸಾಮರಸ್ಯದ ಧಾರ್ಮಿಕ ಕ್ಷೇತ್ರವಾಗಿರುವ ಇಲ್ಲಿ ಸಾಕ್ಷಾತ್ ದೇವಿಯೇ ಧರೆಗಿಳಿದು ಬಂದಂತೆ ಪ್ರತಿಷ್ಠಾಪಿಸಿದ ನವದುರ್ಗೆಯರ ಮೂರ್ತಿಗಳು ಹೃನ್ಮನ ತಣಿಸುತ್ತಿವೆ. ಇಲ್ಲಿ ಜಾತಿ, ಭೇದ ರಹಿತವಾಗಿ ಜನ ಸೇರುತ್ತಾರೆ. ಮೊದಲ ದಿನವೇ ಸಾವಿರಾರು ಜನ ಆಗಮಿಸಿದ್ದಾರೆ. ಎಲ್ಲವೂ ಗೋಕರ್ಣನಾಥ ದೇವರು ಮತ್ತು ಬ್ರಹ್ಮಶ್ರೀ ನಾರಾಯಣಗುರುಗಳ ಅನುಗ್ರಹಗಳಿಂದ ನಡೆಯುತ್ತಿದೆ. ನವರಾತ್ರಿ, ದಸರಾ ಎಲ್ಲರಿಗೂ ಶುಭ ತರಲಿ.ಮಂಗಳೂರು ದಸರಾ ಮಹೋತ್ಸವ ಈ ಬಾರಿ ಹೊಸತನದೊಂದಿಗೆ ನಡೆಯಲಿದೆ. ಅ.4ರಂದು ಬಹುಭಾಷಾ ಕವಿಗೋಷ್ಠಿ, ವ್ಯಸನಮುಕ್ತ ಜಿಲ್ಲೆಯನ್ನಾಗಿಸುವ ಸಂದೇಶದೊಂದಿಗೆ 6ರಂದು ಬೆಳಗ್ಗೆ 5.30ಕ್ಕೆ ಹಾಫ್ ಮ್ಯಾರಥನ್ ಆಯೋಜಿಸಲಾಗಿದೆ. ಮಂಗಳೂರು ದಸರಾ ಮೆರವಣಿಗೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿಯೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪದ್ಮರಾಜ್ ಆರ್., ಖಜಾಂಚಿ
ಆಕರ್ಷಕ ದರ್ಬಾರ್
ನವದುರ್ಗೆಯರನ್ನು ಪ್ರತಿಷ್ಠಾಪಿಸುವ ದರ್ಬಾರ್ ಮಂಟಪ ಆಕರ್ಷಕವಾಗಿ ಕಂಗೊಳಿಸುತ್ತಿದೆ. ಅಕ್ರೆಲಿಕ್ ಬಳಸಿ ನಿರ್ಮಿಸಿದ ಈ ಬಾರಿಯ ಶಾರದಾ ಮಂಟಪ ಅತ್ಯಾಕರ್ಷಕ ಬಣ್ಣ ಬಣ್ಣದ ವಿದ್ಯುದ್ದೀಪಾಲಂಕಾರ ಮತ್ತಷ್ಟು ಮೆರುಗು ನೀಡಿದೆ. ಕುದ್ರೋಳಿ ದೇಗುಲದತ್ತ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ.
ಝಗಮಗಿಸುವ ರಾಜಬೀದಿ
ಮಂಗಳೂರಿನ ರಾಜಬೀದಿಗಳು ಬೆಳಕಿನ ಚಿತ್ತಾರದಲ್ಲಿ ಝಗಮಗಿಸುತ್ತಿವೆ. ಕುದ್ರೋಳಿ, ಮಣ್ಣಗುಡ್ಡೆ, ಲೇಡಿಹಿಲ್, ಲಾಲ್ಭಾಗ್, ಪಿವಿಎಸ್, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ ಮುಂತಾದ ಕಡೆ ದಸರಾ ಮೆರವಣಿಗೆ ಸಾಗುವ 9 ಕಿ.ಮೀ. ರಸ್ತೆ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿವೆ.