ಕಾವೂರು ದೇವಸ್ಥಾನ ಅಭಿವೃದ್ಧಿಗೆ ಗರಿಷ್ಠ ಅನುದಾನಕ್ಕೆ ಪ್ರಯತ್ನ - ಬ್ರಹ್ಮಕಲಶ ಪೂರ್ವಸಿದ್ಧತಾ ಸಭೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಭರವಸೆ

mng--3 Nov Kavoor templee
Published on

ಮಂಗಳೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಗತ್ಯವಿರುವ ಗರ್ಭಗುಡಿಯ ಜೀರ್ಣೋದ್ಧಾರ, ಪಾಕಶಾಲೆ, ಅನ್ನಛತ್ರ ಹಾಗೂ ಸಭಾಭವನಗಳ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದು, ಸರ್ಕಾರದಿಂದ ಗರಿಷ್ಠ ಅನುದಾನ ಒದಗಿಸಿ ಕೊಡುವುದಾಗಿ ಶಾಸಕ ಡಾ.ವೈ. ಭರತ್ ಶೆಟ್ಟಿ ಭರವಸೆ ನೀಡಿದ್ದಾರೆ.

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಬ್ರಹ್ಮಕಲಶದ ಪೂರ್ವಸಿದ್ಧತಾ ಮೊದಲ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಕ್ಷೇತ್ರದ ಅಭಿವೃದ್ಧಿಗೆ ಕೆಲಸಗಳಿಗೆ 50 ಲಕ್ಷ ರೂ. ಅನುದಾನ ಕಲ್ಪಿಸಿ ಕೊಡಲಾಗಿದೆ. ಊರ, ಪರವೂರ ಭಕ್ತರು ಶ್ರೀ ದೇವರ ಕೆಲಸಕ್ಕೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. 15 ವರ್ಷಗಳ ಬಳಿಕ 2025 ಮಾ.1ರಿಂದ 9ರ ತನಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಹೆಚ್ಚಿನ ಸಮಯ ಇಲ್ಲ. ಸಿದ್ಧತಾ ಕೆಲಸ ಕಾರ್ಯಗಳು ವೇಗವಾಗಿ ನಡೆಯಬೇಕಾಗಿದೆ. ಭಕ್ತರು ಪೂರ್ಣ ಸಹಕಾರ ನೀಡಬೇಕು ಎಂದರು.

ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ಮಾತನಾಡಿ, ದೇವಸ್ಥಾನದ ಎಲ್ಲಾ ಸತ್ಕಾರ್ಯಗಳಲ್ಲಿ ಸಮಸ್ತ ಭಕ್ತ ಬಾಂಧವರು ಸಕ್ರೀಯವಾಗಿ ಭಾಗವಹಿಸಿ ತನು ಮನ ಧನ ನೀಡಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದರು.

ಮೇಯರ್ ಮನೋಜ್ ಕುಮಾರ್, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಮೋಹನ ಪ್ರಭು, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಆಶಿಕ್ ಬಳ್ಳಾಲ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಿರಿಜಾತೆ ಆರ್ ಭಂಡಾರಿ, ಉಮಾನಾಥ್ ಮೊದಲಾದವರು ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮತಿ ಸದಸ್ಯರಾದ ಸದಾಶಿವ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪುರುಷೋತ್ತಮ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net