ನಾಗರಿಕ ಶಿಷ್ಟಾಚಾರಗಳ ಪಾಲನೆಯಿಂದ ಭವಿಷ್ಯದ ಭಾರತ ಉಜ್ವಲ - ಮಂಥನ ಮಾಸಿಕ ಸಂವಾದದಲ್ಲಿ ಸ್ವಾಮಿ ಪ್ರಸಾದ್ ಅಭಿಮತ

mng--28 Nov kavoor manthana
Published on

ಮಂಗಳೂರು: ‘ದುಷ್ಟ ಸಂಹಾರ, ಶಿಷ್ಟ ರಕ್ಷಣೆ’ ಕೃಷ್ಣಾವತಾರದ ಉದ್ದೇಶ ಆಗಿದ್ದಂತೆ, ನಾಗರಿಕತೆಯ ಕನಿಷ್ಟ ಶಿಷ್ಟಾಚಾರಗಳನ್ನಾದರೂ ಪಾಲಿಸಿ ಮುಂದಿನ ಪೀಳಿಗೆಗೆ ದಾಟಿಸಿ ನಮ್ಮ ಮೌಲ್ಯಗಳನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ವ್ಯವಸ್ಥಾ ಪ್ರಮುಖ ಸ್ವಾಮಿ ಪ್ರಸಾದ ಹೇಳಿದರು.

ಕಾವೂರು ಸೊಸೈಟಿ ಸಭಾಂಗಣದಲ್ಲಿ ಬುಧವಾರ ನಡೆದ ‘ಮಂಥನ’ ಮಾಸಿಕ ಸಂವಾದ ಕಾರ್ಯಕ್ರಮದಲ್ಲಿ ‘ನಾಗರಿಕ ಶಿಷ್ಟಾಚಾರ’ ಎನ್ನುವ ವಿಷಯದ ಮೇಲೆ ಅಭಿಪ್ರಾಯ ಹಂಚಿಕೊಂಡರು.

ಭಾರತದ ಐತಿಹಾಸಿಕ ಪುಟಗಳಲ್ಲಿ ಇಣುಕಿ ನೋಡಿದಾಗ, ಭಾರತದಲ್ಲಿ ಸಾಮಾಜಿಕ ನ್ಯಾಯ, ಸತ್ಯಪರತೆ, ಧರ್ಮರಕ್ಷಣೆ, ನೈತಿಕ ಮೌಲ್ಯಗಳು ಉತ್ತುಂಗದಲ್ಲಿ ಇತ್ತು. ಪರದೇಶಿಯರು ಇಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ತೊಡಕಾಗಿದ್ದ ಭಾರತೀಯರ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕೆಡಿಸಿದರೆ ಮಾತ್ರ ಅದು ಸಾಧ್ಯ ಎಂದು ಅರಿತು, ಜೀವನ ಮೌಲ್ಯಗಳನ್ನು ಕಲಿಸುತ್ತಿದ್ದ ಗುರುಕುಲ ಪದ್ದತಿಯನ್ನು ಇಲ್ಲವಾಗಿಸಿ ಲಾರ್ಡ್ ಮೆಕಾಲೆಯ ಶಿಕ್ಷಣ ಪದ್ದತಿಯನ್ನು ಹೇರಲು ಮುಂದಾದರು ಎಂದು ಸ್ವಾಮಿ ಪ್ರಸಾದ ಅವರು ಪ್ರತಿಪಾದಿಸಿದರು.

ನಮ್ಮ ಪ್ರಧಾನ ಮಂತ್ರಿಯವರು ಪ್ರತಿ ಬಾರಿ ಜಗತ್ತಿನ ಬೇರೆ ಬೇರೆ ದೇಶಗಳ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸುವಾಗಲೂ ಸಹ,ಇದು ಇಡೀ ಭಾರತ ದೇಶಕ್ಕೆ ಸಲ್ಲುವ ಗೌರವ. ನಾನು ಪ್ರತಿನಿಧಿ ಅಷ್ಟೇ ಎಂದು ಹೇಳುತ್ತಾರೆ. ಆ ದೇಶಗಳು ಭಾರತದ ಮೇಲೆ ಮತ್ತು ಭಾರತೀಯರ ಮೇಲೆ ಇಟ್ಟಿರುವ ನಿರೀಕ್ಷೆಗಳು ಹುಸಿಯಾಗದಂತೆ ನಡೆದುಕೊಳ್ಳುವುದು ಪ್ರತಿ ಭಾರತೀಯನ ಕರ್ತವ್ಯವಾಗಿದೆ ಎಂದರು.

ಕಾವೂರಿನ ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯರು ಕಳೆದುಕೊಂಡ ಮೌಲ್ಯಗಳನ್ನು, ನಾಗರಿಕ ಶಿಷ್ಟಾಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವುಗಳನ್ನು ಪುನರ್ ಸ್ಥಾಪಿಸಲು ಸಾಧ್ಯ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾವೂರು ನಗರ ಸಂಘಚಾಲಕ್ ಬಿ.ಕೆ.ಕುಮಾರ್ ಉಪಸ್ಥಿತರಿದ್ದರು. ನಿತ್ಯಾನಂದ ಅವರು ‘ದೇಶೀ ದಿಶೆ’ ಎನ್ನುವ ಪುಸ್ತಕ ಪರಿಚಯ ಮಾಡಿಕೊಟ್ಟರು. ಮೋಹನದಾಸ್ ಮರಕಡ ಸ್ವಾಗತಿಸಿದರೆ, ರಂಗನಾಥ್ ಕಲ್ಕುಣಿ ವಂದಿಸಿದರು. ಸುನಿತಾ ಹರೀಶ್ ನಿರೂಪಿಸಿದರು.

===================

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net