

ಮಂಗಳೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮಾ.1ರಿಂದ ಆರಂಭಗೊಂಡು ಮಾ.9ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳಿಂದ ಸಮಾಪನಗೊಂಡಿತು.
ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವದ ಆರಂಭದಿಂದಲೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರಗಿದವು. ಭಾನುವಾರ ಪ್ರಾತಃಕಾಲ ಕವಾಟ ಉದ್ಘಾಟನೆ, ತೈಲಾಭಿಷೇಕ ಪ್ರಾಯಶ್ಚಿತ್ತ ಶಾಂತಿ ಹೋಮ, ಕಲಶಾಭಿಷೇಕ, ತತ್ವಕಲಶಾಭಿಷೇಕ, ಪರಿಕಲಶಾಭಿಷೇಕ, ಬೆಳಗ್ಗೆ 8.10 ರಿಂದ 8.40ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಅವಸ್ರುತೋಕ್ಷಾ ಬಲಿ ಜರುಗಿತು.
ಬೆಳಗ್ಗೆ 11ಕ್ಕೆ ಶ್ರೀ ದೇವರಿಗೆ ಮಹಾಪೂಜೆ, ಪಲ್ಲಪೂಜೆ, 12 ರಿಂದ ಮಹಾ ಅನ್ನಸಂತರ್ಪಣೆ, ವೈದಿಕ ಮಂತ್ರಾಕ್ಷತೆ, ರಾತ್ರಿ ಶ್ರೀ ದೇವರಿಗೆ ಮಹಾರಂಗಪೂಜೆ, ಬಲಿ ಉತ್ಸವ, ರಥೋತ್ಸವ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.