

ಮಂಗಳೂರು: ಕರ್ನಾಟಕ ಕ್ರೀಡಾಕೂಟದ ಮೊದಲ ದಿನ ಮಂಗಳೂರಿನಲ್ಲಿ ನಡೆದ ವೇಟ್‌ಲಿಫ್ಟಿಂಗ್ ಪಂದ್ಯದಲ್ಲಿ ಅತಿಥೇಯ ದ.ಕ. ಜಿಲ್ಲೆಗೆ ಎರಡು ಚಿನ್ನದ ಪದಕ ಲಭಿಸಿದೆ. ಉಜಿರೆ ಎಸ್‌ಡಿಎಂ ಕಾಲೇಜು ಹಾಗೂ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಉಜಿರೆ ಎಸ್‌ಡಿಎಂ ಕಾಲೇಜಿನ ಮನೋಜ್ ಆರ್.ಜಿ. ಮತ್ತು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ನಾಗರಾಜ್ ಕಣ್ಣಿ ಎಸ್. ಇವರು ಪುರುಷರ ವೇಟ್‌ಲಿಫ್ಟಿಂಗ್‌ನಲ್ಲಿ ಕ್ರಮವಾಗಿ 55 ಕೆಜಿ ಮತ್ತು 61 ಕೆಜಿ ವಿಭಾಗದ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಮನೋಜ್ ಅವರು ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 110 ಕೆಜಿ ಒಳಗೊಂಡಂತೆ ಒಟ್ಟು 192 ಕೆಜಿ ಭಾರ ಎತ್ತಿದರು. ನಾಗರಾಜ್ ಒಟ್ಟು 125 ಕೆಜಿ ಒಳಗೊಂಡಂತೆ 220 ಕೆಜಿ ಭಾರ ಎತ್ತಿ ಸಾಧನೆ ಮಾಡಿದರು.
55 ಕೆಜಿ ವಿಭಾಗದಲ್ಲಿ ಬೆಳಗಾವಿ ಡಿವೈಇಎಸ್‌ನ ರೋನಿತ್ ಮುರುಕುಟೆ (170 ಕೆಜಿ) ಮತ್ತು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಮೊಹಮ್ಮದ್ ಅಮೀರ್ (167 ಕೆಜಿ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. 61 ಕೆಜಿ ವಿಭಾಗದಲ್ಲಿ ಮಂಗಳ ಥೋರವರ್ಸ್ ಅಕಾಡೆಮಿಯ ರಹೀಫನ್ ಜೆ (138 ಕೆಜಿ) ಹಾಗೂ ಜೈನ್ ಜೂನಿಯರ್ ಕಾಲೇಜಿನ ರಂಜನ್ ಆರ್.ಕೆ (120 ಕೆಜಿ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.
49 ಕೆಜಿ ಮಹಿಳಾ ವಿಭಾಗದಲ್ಲಿ ಸಂಜೀವಿ ಶೆಟ್ಟಿ ಬೆಂಗಳೂರು ಕ್ಲಬ್‌ನ ಲಕ್ಷ್ಮೀ ಬಿ.(156 ಕೆಜಿ) ಚಿನ್ನ, ಎಸ್‌ಡಿಎಂ ಉಜಿರೆಯ ಅಮೃತಾ ಎಸ್.ಆರ್.(90 ಕೆಜಿ) ಬೆಳ್ಳಿ ಹಾಗೂ ಮೈಸೂರು ಜಿಲ್ಲಾ ವೇಟ್‌ಲಿಫ್ಟಿಂಗ್ ಎಸೋಸಿಯೇಷನ್‌ನ ಹರ್ಷಿತಾ ಎಂ.(76 ಕೆಜಿ) ಕಂಚು ಪದಕ ಗಳಿಸಿದರು.
45 ಕೆಜಿ ಮಹಿಳಾ ವಿಭಾಗದಲ್ಲಿ ಡಯಸಿಸ್ ಬೆಂಗಳೂರಿನ ಪಲ್ಲವಿ(136 ಕೆಜಿ) ಚಿನ್ನ, ಪುತ್ತೂರು ಫಿಲೋಮಿನಾ ಕಾಲೇಜಿನ ಸ್ಪಂದನಾ(133 ಕೆಜಿ) ಬೆಳ್ಳಿ ಹಾಗೂ ಅದೇ ಕಾಲೇಜಿನ ಶಿವಾನಿ ಮಾಚಯ್ಯ(89 ಕೆಜಿ) ಕಂಚಿನ ಪದಕ ಪಡೆದರು.