

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಡಿ.21ರಿಂದ ಜ.19ರ ತನಕ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಕರಾವಳಿ ಉತ್ಸವ ಹಮ್ಮಿಕೊಂಡಿದ್ದು, ಮೊದಲ ಬಾರಿಗೆ ಕದ್ರಿ ಪಾರ್ಕ್‌ನಲ್ಲಿ ರೊಬೊಟಿಕ್ ಬಟರ್ ಫ್ಲೈ ಪ್ರದರ್ಶನ ನಡೆಯಲಿದೆ.
ಡಿ. 22ರಂದು ನಗರ ಕದ್ರಿ ಪಾರ್ಕ್‌ನಲ್ಲಿ ಸಂಜೆ 4 ಗಂಟೆಗೆ ರೊಬೊಟಿಕ್ ಬಟರ್ ಫ್ಲೈ ಪಾರ್ಕ್ ಪ್ರದರ್ಶನ ಆರಂಭಗೊಳ್ಳಲಿದೆ. ಪ್ರತಿ ದಿನ ಈ ಪ್ರದರ್ಶನ ಸಂಜೆ 4ರಿಂದ ರಾತ್ರಿ 9ಗಂಟೆಯವರೆಗೆ ವಿಶೇಷ ಆಕರ್ಷಣೆಯಾಗಿ ಮುಂದುವರಿಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
21 ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಆ ದಿನ ಸಂಜೆ 4ಕ್ಕೆ ಕೊಡಿಯಾಲ್ ಬೈಲ್ ನ ಕೆನರಾ ಕಾಲೇಜಿನಿಂದ ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ. ಜಿಲ್ಲೆಯ ಸಂಸ್ಕೃತಿ ಮತ್ತು ವೈವಿಧ್ಯಮಯ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಕಲಾವಿದರ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಸಂಜೆ 5.30ಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ಕರಾವಳಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಬಳಿಕ ಎರಡು ದಿನಗಳ ಕಾಲ ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ ಎಂದವರು ತಿಳಿಸಿದರು.
ವಸ್ತು ಪ್ರದರ್ಶನ
ವಸ್ತು ಪ್ರದರ್ಶನವು ಜಾಗತಿಕ ಹಳ್ಳಿ (ಗ್ಲೋಬಲ್ ವಿಲೆಜ್) ಎಂಬ ಪರಿಕಲ್ಪನೆಯಲ್ಲಿ ಕರಾವಳಿಯ ನೈಜ ಸಂಸ್ಕೃತಿ, ಸಂಪ್ರದಾಯ, ಸಾಹಿತ್ಯ, ಉಡುಗೆ ತೊಡುಗೆ ಮತ್ತು ಖಾದ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಕೂಡಿರಲಿದೆ. ವಿವಿಧ ಜನಾಂಗದ ರೀತಿ ರಿವಾಜುಗಳನ್ನು ಪರಿಚಯಿಸಲು ಪ್ರತ್ಯೇಕ ವಿಭಾಗಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಇಲ್ಲಿ ಕೈಮಗ್ಗ, ನೇಕಾರ,ಕುಂಬಾರ, ಕರಕುಶಲ ವಸ್ತುಗಳ ತಯಾರಿಕೆ ಮತ್ತು ಇನ್ನಿತರ ಕೌಶಲ್ಯಗಳ ಅನಾವರಣವಾಗಲಿದೆ. ಆದಿವಾಸಿ ಮತ್ತು ಗುಡ್ಡಗಾಡು ಜನಾಂಗದ ಸಾಂಪ್ರದಾಯಿಕ ಉತ್ಪನ್ನಗಳು ಸಹ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇದಲ್ಲದೆ ವಸ್ತು ಪ್ರದರ್ಶನಕ್ಕಾಗಿ ಒಟ್ಟು 60 ಮಳಿಗೆಗಳ ವ್ಯವಸ್ಥೆ ಮಾಡಲಾಗಿದ್ದು ಈಗಾಗಲೇ 39ರಷ್ಟು ಮಳಿಗೆಗಳು ಬುಕ್ ಆಗಿವೆ. ಹೆಚ್ಚು ಮಳಿಗೆಗಳಿಗೆ ಬೇಡಿಕೆ ಬಂದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಇದಲ್ಲದೆ ಅಮ್ಯೂಸ್‌ಮೆಂಟ್‌ಪಾರ್ಕ್ ವ್ಯವಸ್ಥೆಯೂ ಕರಾವಳಿ ಉತ್ಸವದಲ್ಲಿ ಲಭ್ಯವಾಗಲಿದೆ. ಕರಾವಳಿಯ ವೈವಿಧ್ಯಮಯ ಖಾದ್ಯಗಳ ತಯಾರಿಕೆ, ಪ್ರದರ್ಶನ ಮತ್ತು ಮಾರಾಟಗಳನ್ನು ಒಂದೇ ಸೂರಿನಡಿ ಏರ್ಪಡಿಸಲಾಗಿದ್ದು, ತುಳು ನಾಡಿನ ತಿಂಡಿ ತಿನಿಸುಗಳನ್ನು ಪರಿಚಯ ಮಾಡಿಕೊಳ್ಳಲು ಮತ್ತು ಸವಿಯಲು ಸಾರ್ವಜನಿಕರಿಗೆ ಇದೊಂದು ಅಪರೂಪದ ಅವಕಾಶವಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿಲ್ಲಾಡಳಿತದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆ ಇವುಗಳ ಸಹಕಾರದಿಂದ ಆಕರ್ಷಕವಾಗಿ ಕರಾವಳಿ ಉತ್ಸವವನ್ನು ನಡೆಸಲು ರೂಪುರೇಷೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿ.ಪಂ. ಸಿಇಒ ಡಾ. ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.