

ಮಂಗಳೂರು: ದಾಮೋದರ ನಿಸರ್ಗರು ತುಳು ಕೂಟದ ಮೂಲಕ ತುಳು ಭಾಷೆಯ ಅಭಿವೃದ್ದಿಗೆ ಬದುಕಿನ ಕೊನೆಯ ತನಕವೂ ಸಾಕಷ್ಟು ದುಡಿದಿದ್ದಾರೆ ಎಂದು ಕಲ್ಕೂರ ಪ್ರತಿಷ್ಟಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಕಲ್ಕೂರ ಪ್ರತಿಷ್ಠಾನದ ವತಿಯಿಂದ ಬುಧವಾರ ನಗರದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ದಾಮೋದರ ನಿಸರ್ಗ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ‌್ಯಕ್ರಮದಲ್ಲಿ ಮಾತನಾಡಿದರು. ಸಾಧನೆಯ ಗುರಿತನದ ಹೆಜ್ಜೆಯೊಂದಿಗೆ ಸಮಾಜಮುಖಿ ಬದುಕಿಗೆ ಮಾತೃ ಸಂಸ್ಕೃತಿಯನ್ನು ಕಟ್ಟಿಕೊಂಡು ಸಾಗಿದವರು ಎಂದರು.
ಖ್ಯಾತ ನಾಟಕ ಬರಹಗಾರ ಕದ್ರಿ ನವನೀತ್ ಶೆಟ್ಟಿ ಮಾತನಾಡಿ, ನಿಸರ್ಗ ಅವರದ್ದು ಮಾತು ಕಡಿಮೆ ಆದರೆ ಮಾತಿನಲ್ಲಿ ದೃಢತೆ ಇರುತ್ತಿತ್ತು. ಇಸವಿಯ ಜತೆಯಲ್ಲಿ ನಿಖರವಾಗಿ ಹೇಳುವ ಕೆಲಸವನ್ನು ಮಾಡುತ್ತಿದ್ದರು. ತುಳು ಭಾಷೆಗೆ ವಿಶೇಷ ಗೌರವ ತಂದುಕೊಡುವಲ್ಲಿ ನಿಸರ್ಗ ಅವರದ್ದು ಪಾತ್ರವಿದೆ ಎಂದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ತುಳುವಿನ ಪ್ರತಿಯೊಂದು ಕಾರ‌್ಯಕ್ರಮದಲ್ಲಿ ನಿಸರ್ಗ ಬರುತ್ತಿದ್ದರು. ತುಳು ಸಂಘಟನೆಯಲ್ಲೂ ಅವರು ತೊಡಗಿಸಿಕೊಂಡು ತುಳುಕೂಟದ ಮೂಲಕ ಸಾಕಷ್ಟು ಕಾರ‌್ಯಕ್ರಮಗಳನ್ನು ಮಾಡುತ್ತಾ ಸಾಗಿದರು ಎಂದರು.
ರಂಗಭೂಮಿ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಮಾತನಾಡಿ ದಾಮೋದರ ನಿಸರ್ಗ ಅವರಲ್ಲಿ ಅವರ ಸಹೋದರ ವಿಶುಕುಮಾರ್ ಅವರನ್ನು ಕಾಣುತ್ತಿದ್ದೇವು. ವಿಶು ಕುಮಾರ್ ಕೋಟಿ ಚೆನ್ನಯ್ಯದ ಮೂಲಕ ತುಳು ಸಿನಿಮಾಕ್ಕೆ ಹೊಸ ದಿಶೆಯನ್ನು ತೋರಿಸಿದವರು ಎಂದರು.
ಈ ಸಂದರ್ಭ ಪ್ರೊ. ಪ್ರಭಾಕರ ಜೋಶಿ, ತಾರನಾಥ ಶೆಟ್ಟಿ ಬೋಳಾರ್, ಭಾಸ್ಕರ ರೈ ಕುಕ್ಕುವಳ್ಳಿ, ತೋನ್ಸೆ ಪುಷ್ಕಲ್ ಕುಮಾರ್, ಪ್ರೊ.ಗಣೇಶ ಅಮೀನ್ ಸಂಕಮಾರ್, ದಯಾನಂದ ಕಟೀಲ್, ರವಿ ಅಲೆವೂರಾಯ, ನಿಸರ್ಗ ಅವರ ಕುಟುಂಬದ ಸದಸ್ಯರು ಹಾಗೂ ಅವರ ಸ್ನೇಹಿತ ವರ್ಗದವರು ಉಪಸ್ಥಿತರಿದ್ದರು.