ಮಂಗಳೂರು: ಪಣಂಬೂರಿನ ಜೋಕಟ್ಟೆ ಬಳಿ 13 ವರ್ಷದ ಬಾಲಕಿ ಕೊಲೆಗೈದ ಸ್ಥಿತಿಯಲ್ಲಿ ಮಂಗಳವಾರ ಮೃತಪಟ್ಟಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸಂಬಂಧಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ಬೆಳಗಾವಿ ಮೂಲದ ಹನುಮಂತ ಎಂಬವರು ವಾಸವಾಗಿದ್ದು, ಇವರ ತಮ್ಮನ ಪುತ್ರಿ ಅಸೈಗೋಳಿಯ ಹಾಸ್ಟೆಲ್‌ನಿಂದ ಶಾಲೆಗೆ ಹೋಗುತ್ತಿದ್ದು ನಾಲ್ಕು ದಿನಗಳ ಹಿಂದೆ ಕೈನೋವು ಇದ್ದುದರಿಂದ ದೊಡ್ಡಪ್ಪನ ಮನೆಗೆ ಬಂದಿದ್ದಳು. ಈ ಸ್ಥಳ ಜೋಕಟ್ಟೆ ವಿಜಯ ವಿಠಲ ಭಜನಾ ಮಂದಿರ ದ ಸಭಾ ಭವನ ಬಳಿಯಿದ್ದು ಮನೆಯ ಮಾಲಿಕರ ಮನೆ ಸಾಕಷ್ಟು ದೂರದಲಿತ್ತು.
ಮನೆಯಲ್ಲಿದ್ದವರೆಲ್ಲ ಕೆಲಸಕ್ಕೆ ಹೋದ ನಂತರ ಬೆಳಗ್ಗೆ 10.30ರ ಸುಮಾರಿಗೆ ಬಾಲಕಿಯ ತಾಯಿ ಪಕ್ಕದ ಮನೆಯವರಿಗೆ ಕರೆ ಮಾಡಿ ಫೋನ್ ಕೊಡಲು ಹೇಳಿದ್ದರು. ಅದರಂತೆ ಪಕ್ಕದ ಮನೆವರು ಬಾಲಕಿ ಇದ್ದ ಬಾಡಿಗೆ ಮನೆಗೆ ಬಂದಾಗ ಕುತ್ತಿಗೆಗೆ ನೇಣು ಬಿಗಿದು ಯಾರೋ ಕೊಲೆ ಮಾಡಿದ ಸ್ಥಿತಿಯಲ್ಲಿ ಬಾಲಕಿಯ ಶವ ಕಂಡುಬಂದಿತ್ತು. ಇದನ್ನು ಬಾಲಕಿಯ ತಾಯಿಗೆ ಫೋನ್‌ನಲ್ಲಿ ತಿಳಿಸಿದ್ದು, ಅವರು ಹನುಮಂತನಿಗೆ ಬಾಡಿಗೆ ಮನೆಗೆ ತೆರಳುವಂತೆ ತಿಳಿಸಿದ್ದರು. ಮನೆಗೆ ಬಂದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಅತ್ಯಾಚಾರ ಶಂಕೆ
ಬಾಲಕಿಯನ್ನು ಅತ್ಯಾಚಾರ ನಡೆಸಿ ಕೊಲೆ ನಡೆಸಿರುವ ಶಂಕೆಯಿದ್ದು, ಮರಣೋತ್ತರ ಪರೀಕ್ಷೆ ವರದಿಯಿಂದ ಎಲ್ಲವೂ ದೃಢಪಡಲಿದೆ. ಈ ಬಗ್ಗೆ ಪಣಂಬೂರು ಪೊಲೀಸರು ತನಿಖೆ ನಡೆಸುತಿದ್ದಾರೆ.
ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್, ಡಿಸಿಪಿ ದಿನೇಶ್ ಕುಮಾರ್, ಪಣಂಬೂರು ಇನ್‌ಸ್ಪೆಕ್ಟರ್ ಮಹಮ್ಮದ್ ಸಲೀಂ, ಮತ್ತಿತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.