

ಮಂಗಳೂರು: ಬೆಂಗಳೂರು ಪರಪ್ಪನ ಅಗ್ರಹಾರ ಜೈಲ್‌ನಲ್ಲಿ ವಿಚಾರಣಾಧೀನ ಕೈದಿಗಳಿಗೆ ರಾಜಾತೀಥ್ಯ ಸಿಗುತ್ತಿರುವ ಸುದ್ದಿಯಾಗಿರುವ ಬೆನ್ನಲ್ಲೇ ಮಂಗಳೂರು ಉಪಕಾರಾಗೃಹ ಕೂಡಾ ಸೇಫ್ ಅಲ್ಲ ಎನ್ನುವುದು ಸಾಬೀತಾಗಿದೆ. ಇಲ್ಲೂ ಮನೆ ಊಟ, ಡ್ರಗ್ಸ್, ಮೊಬೈಲ್ ಮೊದಲಾದ ನಿಷೇಧಿತ ವಸ್ತುಗಳು ನೇರವಾಗಿ ಜೈಲು ಸೇರುತ್ತಿವೆ.
ಡಬಲ್ ಮರ್ಡರ್, ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ, ವಿಚಾರಣಾಧೀನ ಕೈದಿಗಳ ನಡುವೆ ಹೊಡೆದಾಟ ಮೊದಲಾದ ದುಷ್ಕೃತ್ಯ ನಡೆದ ಇತಿಹಾಸವಿರುವ ಮಂಗಳೂರು ಉಪಕಾರಾಗೃಹದಲ್ಲಿ ಡ್ರಗ್ಸ್, ಚೂರಿ, ಮೊಬೈಲ್ ರಾಜಾರೋಷವಾಗಿ ಕೈದಿಗಳಿಗೆ ಪೂರೈಕೆಯಾಗುತ್ತಿದೆ. ಪೊಲೀಸರು ದಿಢೀರ್ ದಾಳಿ ನಡೆಸುವ ವೇಳೆ ಪತ್ತೆಯಾಗುತ್ತಿರುವುದು ಇದಕ್ಕೆ ನಿದರ್ಶನ. ಇತ್ತೀಚೆಗೆ 389 ವಿಚಾರಣಾಧೀನ ಕೈದಿಗಳ ಪೈಕಿ 110 ಶಂಕಿತರನ್ನು ರಕ್ತ ಪರೀಕ್ಷೆಗೊಳಪಡಿಸಿದಾಗ 44 ಮಂದಿ ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿತ್ತು.
ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿ ಬರುವ ವಿಚಾರಣಾಧೀನ ಕೈದಿಗಳು ಜೈಲು ಪ್ರವೇಶಿಸುವ ಮುನ್ನ ಅವರನ್ನು ಹಾಗೂ ಕೈದಿಗಳನ್ನು ಸಂದರ್ಶಿಸಲು ಬರುವ ಮನೆಯವರು, ಸ್ನೇಹಿತರು ಹಾಗೂ ಜೈಲು ಸಿಬ್ಬಂದಿಗಳನ್ನು ಕೂಡಾ ಹೊರಗೆ ಕೈಗಾರಿಕಾ ಭದ್ರತಾ ಪಡೆಯವರು ತಪಾಸಣೆಗೊಳಪಡಿಸುತ್ತಾರೆ. ಒಳಗೆ ಕೈದಿಗಳಿಗೆ ಅವರ ಮನೆಯವರು ತಂದ ಬಟ್ಟೆ, ಆಹಾರ ಮೊದಲಾದ ವಸ್ತುಗಳನ್ನು ಸ್ಕಾೃನ್ ಮಾಡಲಾಗುತ್ತದೆ. ಅದರಲ್ಲಿ ನಿಷೇಧಿತ ವಸ್ತುಗಳಿದ್ದರೆ ಪತ್ತೆಯಾಗುತ್ತದೆ. ಜತೆಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮೊಬೈಲ್ ಜಾಮರ್ ಇದೆ. ಇಷ್ಟೆಲ್ಲಾ ನಿಗಾ ವ್ಯವಸ್ಥೆಗಳಿದ್ದರೂ ಡ್ರಗ್ಸ್, ಮೊಬೈಲ್, ಸಿಮ್ ಕಾರ್ಡ್‌ಗಳು ಸೇರಿದಂತೆ ನಿಷೇಧಿತ ವಸ್ತುಗಳು ವಿಚಾರಣಾಧೀನ ಕೈದಿಗಳಿಗೆ ತಲುಪುವುದು ಅಚ್ಚರಿ ಉಂಟು ಮಾಡಿದೆ.
ದಿಡೀರ್ ದಾಳಿಯಿಂದ ಬಯಲು
ಜು.25ರಂದು ಬೆಳಗ್ಗಿನ ಜಾವ ಪೊಲೀಸರು ದಾಳಿ ನಡೆಸಿದಾಗ 25 ಮೊಬೈಲ್ ಫೋನ್, ಒಂದು ಬ್ಲೂಟುತ್ ಉಪಕರಣ, ಐದು ಇಯರ್ ಫೋನ್, ಒಂದು ಪೆನ್ ಡ್ರೈವ್, ಐದು ಮೊಬೈಲ್ ಚಾರ್ಜರ್, ಸಿಗರೇಟ್ ಪ್ಯಾಕ್, ಮೂರು ಕೇಬಲ್, ಸ್ವಲ್ಪ ಪ್ರಮಾಣದಲ್ಲಿ ಗಾಂಜಾ ಮತ್ತು ಡ್ರಗ್ಸ್ ಪತ್ತೆಯಾಗಿತ್ತು. ಜೈಲಿನ ಒಳಗಿದ್ದುಕೊಂಡೇ ಕೈದಿಗಳು ಹಫ್ತಾ ವಸೂಲಿ, ಹಣಕ್ಕಾಗಿ ಡಿಮ್ಯಾಂಡ್ ಇಡುವುದು, ಬೆದರಿಕೆ ಹಾಕುವಂತಹ ಕೃತ್ಯ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು. ಈ ಹಿಂದೆಯೂ ಹಲವು ಬಾರಿ ಪೊಲೀಸರು ದಾಳಿ ನಡೆಸಿದಾಗ ಇಂತಹ ವಸ್ತುಗಳು ಸಿಕ್ಕಿದ್ದವು.
ಮೊಬೈಲ್‌ಗಿಲ್ಲ ತಡೆ
ಜೈಲ್‌ಗೆ ಮೊಬೈಲ್ ಜಾಮರ್ ಅಳವಡಿಸಿದ್ದರೂ ಜೈಲ್‌ನೊಳಗೆ ವಿಚಾರಣಾಧೀನ ಕೈದಿಗಳಿಗೆ ಮೊಬೈಲ್ ಬಳಕೆ ಮಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಜೈಲ್‌ನೊಳಗೆ ಕುಳಿತುಕೊಂಡೇ ಡೀಲ್ ಮಾಡುವ ಕೈದಿಗಳು ಮಂಗಳೂರು ಜೈಲ್‌ನಲ್ಲಿದ್ದಾರೆ. ಕೆಲವು ಪಾತಕಿಗಳಿಗೆ ಜೈಲ್ ಸ್ವರ್ಗದಂತೆ. ಹೊರಗೆ ಬಂದರೆ ಅವರಿಗೆ ಜೀವ ಭಯವಿರುತ್ತದೆ. ಆದರೆ ಜೈಲ್‌ನೊಳಗೆ ಇದ್ದಷ್ಟೂ ಅವರು ಸೇಫ್ ಆಗಿರುತ್ತಾರೆ. ಅದಕ್ಕಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಲು ಬಯಸುವುದಿಲ್ಲ. ಆ.11ರಂದು ರಾತ್ರಿ ತೊಕ್ಕೊಟ್ಟುನಲ್ಲಿ ನಡೆದ ಉಳ್ಳಾಲ ಮುಕ್ಕಚೇರಿಯ ಕಡಪ ಸಮೀರ್ ಕೊಲೆ ಇದಕ್ಕೆ ನಿದರ್ಶನ. ಎರಡು ದಿನಗಳ ಹಿಂದೆಯಷ್ಟೇ ಜೈಲ್‌ನಿಂದ ಬಿಡುಗಡೆಗೊಂಡಿದ್ದ. ಅಷ್ಟರಲ್ಲಿ ವಿರೋಧಿ ಗ್ಯಾಂಗ್ ಮುಹೂರ್ತ ಇಟ್ಟು ಆತನನ್ನು ತಾಯಿ, ಪತ್ನಿಯ ಎದುರಲ್ಲೇ ಮುಗಿಸಿದ್ದರು.
ಹಣ ವಸೂಲಿ ಆರೋಪ
ವಿಚಾರಣಾಧೀನ ಕೈದಿಗಳನ್ನು ಭೇಟಿಯಾಗಲು ಬರುವ ಅವರ ಸಂಬಂಧಿಕರು, ಸ್ನೇಹಿತರಿಂದ ಜೈಲು ಅಧಿಕಾರಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ನಿರಂತರ ಕೇಳಿ ಬರುತ್ತಿದೆ. ಜೈಲು ಅಧಿಕಾರಿಗಳಿಗೆ ಹಣ ನೀಡಿದರೆ ಜೈಲ್‌ನೊಳಗೆ ಏನು ಬೇಕಾದರೂ ಕೊಂಡೊಯ್ಯಬಹುದು. ಹಣವಂತ ಕೈದಿಗಳು ಅಧಿಕಾರಿಗಳಿಗೆ ಹಣ ನೀಡಿ ಬಾಯಿ ಮುಚ್ಚಿಸುತ್ತಾರೆ. ಬಿರಿಯಾನಿ, ಬೀಡಿ, ಸಿಗರೇಟು, ಗಾಂಜಾ ಕೂಡಾ ಜೈಲ್‌ಗೆ ಬರುತ್ತದೆ ಎನ್ನುತ್ತಾರೆ ಕೈದಿಗಳಾಗಿದ್ದು, ಇದೀಗ ಜಾಮೀನು ಪಡೆದು ಹೊರಬಂದವರು.
ಮಂಗಳೂರು ಉಪಕಾರಾಗೃಹದಲ್ಲಿ ತಪಾಸಣೆ ಬಿಗುಗೊಳಿಸಲಾಗಿದೆ. ಯಾವುದೇ ನಿಷೇಧಿತ ವಸ್ತುಗಳು ಒಳಗೆ ಪ್ರವೇಶಿಸದಂತೆ ಹೆಚ್ಚಿನ ನಿಗಾ ವಹಿಸಲಾಗಿದೆ.
ಓಬಳೇಶಪ್ಪ, ಅಧೀಕ್ಷಕರು, ಮಂಗಳೂರು ಉಪಕಾರಾಗೃಹ