ದಕ್ಷಿಣ ಕನ್ನಡ 84,200 ಮಂದಿಯಿಂದ 130 ಕಿ.ಮೀ. ಮಾನವ ಸರಪಳಿ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಕ್ಷ ಭೇದ ಮರೆತು ಪಾಲ್ಗೊಂಡ ಜನಪ್ರತಿನಿಧಿಗಳು

mng--15 sep Manava sarapali
Published on


ಮಂಗಳೂರು: ಸ್ವಾತಂತ್ರೃ, ಸಮಾನತೆ ಮತ್ತು ಭ್ರಾತೃತ್ವದ ಜೀವಾಳವಾಗಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಭಾನುವಾರ ಜಿಲ್ಲೆಯ ಹೆಜಮಾಡಿ ಟೋಲ್ ಗೇಟ್‌ನಿಂದ ಸುಳ್ಯ ತಾಲೂಕಿನ ಸಂಪಾಜೆ ಗೇಟ್ ತನಕ ಒಟ್ಟು 130 ಕಿ.ಮೀ ಉದ್ದದ ಬೃಹತ್ ಮಾನವ ಸರಪಳಿ ರಚಿಸಿ ಸಂವಿಧಾನದ ಮಹತ್ವ ಸಾರಲಾಯಿತು.


ಮಂಗಳೂರು 35,000, ಬಂಟ್ವಾಳ ಮತ್ತು ಬೆಳ್ತಂಗಡಿ 18,200, ಸುಳ್ಯ 10,000, ಪುತ್ತೂರು 21,000 ಸೇರಿದಂತೆ ಒಟ್ಟು 84,200 ಮಂದಿ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದರು. 86 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದರು. ಈ ಐತಿಹಾಸಿಕ ಮಾನವ ಸರಪಳಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಲಿದೆ.


ಮಂಗಳೂರಿನ ಸರ್ಕೀಟ್ ಹೌಸ್ ಎದುರು ನಡೆದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನದ ಪೀಠಿಕೆ ಬರಹದ ಭಾವಚಿತ್ರಕ್ಕೆ ಅತಿರ್ಥಿಗಳು ಪುಷ್ಪಾರ್ಚನೆಗೈದರು.
ಆದಿವಾಸಿ ಕೊರಗ ಸಮುದಾಯದ ಡೊಳ್ಳು ಕುಣಿತ, ಗೊಂಬೆ ಕುಣಿತ, ಬ್ಯಾಂಡ್, ಕೇರಳ ಚೆಂಡೆ, ಹುಲಿವೇಷ, ರಥಬೀದಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಕಿರು ನಾಟಕ ಗಮನ ಸೆಳೆಯಿತು.


ಮೂಲ್ಕಿ- ಸುರತ್ಕಲ್- ಬೈಕಂಪಾಡಿ- ನಂತೂರು- ಪಡೀಲ್- ಬಿ.ಸಿ.ರೋಡ್- ಪುತ್ತೂರು- ಸುಳ್ಯ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಮಾನವ ಸರಪಳಿ ಮೂಡಿಬಂತು. ಶಾಲೆ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು, ಪಕ್ಷಭೇದ ಮರೆತು ಜನಪ್ರತಿನಿಧಿಗಳು ಕೂಡ ಭಾಗವಹಿಸಿದ್ದರು. ಅಲ್ಲಲ್ಲಿ ತಿರಂಗಾ ಧ್ವಜಗಳು, ಕೇಸರಿ- ಬಿಳಿ- ಹಸಿರಿನ ಬಂಟಿಂಗ್ಸ್, ಬಲೂನುಗಳು ರಾರಾಜಿಸಿದವು.


ದೇಶದ ಐಕ್ಯತೆ, ಸಮಗ್ರತೆ ಅನಾವರಣ
ಜಿಲ್ಲಾ ಮಟ್ಟದ ಸಭಾ ಕಾರ್ಯಕ್ರಮ ಸರ್ಕೀಟ್‌ಹೌಸ್ ಬಳಿ ನಡೆಯಿತು. ಬೆಳಗ್ಗೆ 9.30ರ ಹೊತ್ತಿಗೆ ನಿಗದಿಪಡಿಸಿದ ಸ್ಥಳದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಜಮಾಯಿಸಿದ್ದರು. 9.37ಕ್ಕೆ ನಾಡಗೀತೆ ಹಾಡಲಾಯಿತು. 9.41ರಿಂದ ಅತಿಥಿಗಳು ಸಂಕ್ಷಿಪ್ತ ಭಾಷಣ ಮಾಡಿದರು. 9.55ರಿಂದ ಸಂವಿಧಾನದ ಪೀಠಿಕೆ ಪ್ರಮಾಣ, 9.57ರಿಂದ 9.59ರವರೆಗೆ ಏಕಕಾಲದಲ್ಲಿ ಕೈ ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿದರು.


ಪಾರ್ಕ್ ರಸ್ತೆಯುದ್ದಕ್ಕೂ ನೂರಾರು ಮಂದಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಸಂವಿಧಾನದ ಪೀಠಿಕೆ ಪ್ರಮಾಣವಚನ ಬೋಧಿಸಿದರು. ಬಳಿಕ ಎರಡೂ ಕೈಗಳನ್ನು ಮೇಲಕ್ಕೆತ್ತಿ ಜೈ ಹಿಂದ್, ಜೈ ಕರ್ನಾಟಕ ಘೋಷಣೆ ಕೂಗಲಾಯಿತು. ಅತಿಥಿಗಳೂ ಸೇರಿದಂತೆ ಪ್ರತಿಯೊಬ್ಬರೂ ಮಾನವ ಸರಪಳಿಯಲ್ಲಿ ಭಾಗಿಯಾದರು. ಬಳಿಕ ವಿವಿಧ ಕಲಾ ತಂಡಗಳ ಪ್ರತಿಭಾ ಪ್ರದರ್ಶನದೊಂದಿಗೆ ಮೆರವಣಿಗೆ ಮೂಲಕ ಸಾಗಿ ಕದ್ರಿ ಪಾರ್ಕ್‌ನಲ್ಲಿ ಗಿಡ ನೆಡುವ ಕಾರ್ಯಕ್ರಮ ನೆರವೇರಿಸಲಾಯಿತು.


ಹೆದ್ದಾರಿಯುದ್ದಕ್ಕೂ ವಿದ್ಯಾರ್ಥಿಗಳು ತಮ್ಮ ಶ್ಷಿಕರ ಜತೆ ಬಂದು ಮಾನವ ಸರಪಳಿಯಲ್ಲಿ ಸೇರಿದ್ದರು. ತಹಸೀಲ್ದಾರ್‌ಗಳು, ತಾಲೂಕು ಪಂಚಾಯಿತಿ ಇಒಗಳು, ಪಿಡಿಓ ಗಳು ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಉಸ್ತುವಾರಿ ವಹಿಸಿದ್ದರು. ಪೊಲೀಸ್ ಇಲಾಖೆ ವತಿಯಿಂದ ಭದ್ರತಾ ವ್ಯವಸ್ಥೆ, ಆರೋಗ್ಯ ಇಲಾಖೆ ಮೂಲಕ ಆರೋಗ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.


ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸೋಣ
ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ,ನಮ್ಮ ಪ್ರಜಾಪ್ರಭುತ್ವ, ಸಂಸ್ಕೃತಿಯ ನೆಲೆಗಟ್ಟಿನಲ್ಲಿ ದೇಶದ ಭವಿಷ್ಯವನ್ನು ಕಟ್ಟಬೇಕಾಗಿದೆ. ನಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವ ಪಣ ತೊಟ್ಟು ಮುನ್ನಡೆಯೋಣ. ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯ ಎಂದರು.


ಭ್ರಾತೃತ್ವ ಭಾವನೆ ನಮ್ಮದಾಗಲಿ
ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಮಾತನಾಡಿ, 2007ರಿಂದ ಪ್ರಜಾಪ್ರಭುತ್ವ ದಿನವನ್ನು ವಿಶ್ವಸಂಸ್ಥೆ ಆರಂಭಿಸಿದೆ. ನಮ್ಮ ದೇಶದ ಸಂವಿಧಾನದ ಮೂಲಕ ಬಿ.ಆರ್. ಅಂಬೇಡ್ಕರ್ ಅವರು ಹಲವು ಕರ್ತವ್ಯ, ಹಕ್ಕುಗಳ ಜತೆ ಸಮಾನತೆಯನ್ನು ಒದಗಿಸಿದ್ದಾರೆ. ಸಂವಿಧಾನದ ಆಶಯದಂತೆ ಎಲ್ಲರೂ ಭ್ರಾತೃತ್ವ ಭಾವದಿಂದ ಒಗ್ಗಟ್ಟಾಗಿ ಬದುಕಬೇಕು ಎಂದು ಹೇಳಿದರು.


ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ, ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ, ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ವಿನಯಕುಮಾರ್ ಎ.ಸಿ., ಪ್ರವೀಣ್‌ಚಂದ್ರ ಆಳ್ವ, ಸಂಗೀತಾ ನಾಯಕ್, ತನ್ವೀರ್ ಶಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆನಂದ್ ಕೆ., ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಡಿಐಜಿ ಅಮಿತ್ ಸಿಂಗ್, ಎಸ್ಪಿ ಯತೀಶ್ ಕುಮಾರ್, ಮನಪಾ ಆಯುಕ್ತ ಆನಂದ್ ಸಿ.ಎಲ್. ಮತ್ತಿತರರು ಉಪಸ್ಥಿತರಿದ್ದರು.


ನಾಡ ಗೀತೆ, ದೇಶ, ರಾಜ್ಯಕ್ಕೆ ಜೈಕಾರ ಮೂಲಕ ಮಾನವ ಸರಪಳಿ ಸಮಾಪ್ತಿಯಾಯಿತು. ಬೆಂಗ್ರೆಯಲ್ಲಿ ನೆಡಲು ಉದ್ದೇಶಿಸಿರುವ ಒಂದು ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಕದ್ರಿ ಪಾರ್ಕ್‌ನಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net