

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ಕಾರ್ಗಿಲ್ ವಿಜಯದ 25ನೇ ವರ್ಷಾಚರಿಸಲಾಯಿತು. 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶಕ್ಕಾಗಿ ಮಡಿದ ಆ ಸೈನಿಕರ ಆತ್ಮಗಳಿಗೆ ಭಾವಪೂರ್ಣ ಪುಷ್ಪ ನಮನ ಸಲ್ಲಿಸಲಾಯಿತು.
ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಮುರಲೀ ಮೋಹನ್ ಚೂಂತಾರು ಅಧ್ಯಕ್ಷತೆ ವಹಿಸಿದ್ದರು. ಒಟ್ಟು 74 ದಿನಗಳ ಕಾರ್ಗಿಲ್ ಕದನದಲ್ಲಿ ಭಾರತದ 2,00,000 ಸೈನಿಕರು ದೇಶಕ್ಕಾಗಿ ಹೋರಾಡಿದರು, ಸುಮಾರು 500ಕ್ಕೂ ಹೆಚ್ಚು ಸೈನಿಕರು ದೇಶಕ್ಕಾಗಿ ತಮ್ಮನ್ನೇ ಬಲಿದಾನ ಮಾಡಿ ಹುತಾತ್ಮರಾದರು. ಆಪರೇಷನ್ ವಿಜಯ್ ಮುಖಾಂತರ ಭಾರತದ ಸೇನೆ ಪಾಕಿಸ್ತಾನವನ್ನು ಬಗ್ಗು ಬಡಿದ ಸವಿನೆನಪಿಗಾಗಿ ಪ್ರತಿ ವರ್ಷ ಜು.26 ರಂದು ಕಾರ್ಗಿಲ್ ವಿಜಯ ದಿವಸ್ ಎಂದು ದೇಶದೆಲ್ಲೆಡೆ ಆಚರಿಸಿ ದೇಶಕ್ಕೆ ಬಲಿದಾನ ಮಾಡಿದ ಸೈನಿಕರನ್ನು ಸ್ಮರಿಸುತ್ತಾ, ನಾವು ನಮ್ಮನ್ನು ದೇಶ ಸೇವೆಗಾಗಿ ಪುನರ್ಸಮರ್ಪಿಸುವ ವಿಶೇಷ ದಿನ ಎಂದು ಅವರು ಅಭಿಪ್ರಾಯಪಟ್ಟರು.
ವೈದ್ಯರಾದ ಡಾ. ಕೇಶವರಾಜ್ ಎಂ.ಡಿ. ಮುಖ್ಯ ಅತಿಥಿಯಾಗಿದ್ದರು.
ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲ, ಹಿರಿಯ ಗೃಹರಕ್ಷಕರಾದ ಸುನಿಲ್ ಕುಮಾರ್, ಧನಂಜಯ್, ರಾಜೇಶ್ ಗಟ್ಟಿ, ಜ್ಞಾನೇಶ್, ಸಂಜಯ್ ಶೆಣೈ, ಜೀವನ್ ಡಿಸೋಜ, ನವೀನ್, ಚಂದ್ರಶೇಖರ್, ಸುಲೋಚನಾ, ನಿಶಾ ಮುಂತಾದವರು ಉಪಸ್ಥಿತರಿದ್ದರು.