ಹೈಕೋರ್ಟ್ ಪೀಠ ಸ್ಥಾಪನೆ ಪಕ್ಷಾತೀತ ಹೋರಾಟ ಸಮಾಲೋಚನಾ ಸಭೆಯಲ್ಲಿ ಐವನ್ ಡಿಸೋಜ

mng-oct1-sdm
Published on

ಮಂಗಳೂರು: ಕರಾವಳಿ ಜಿಲ್ಲೆಗಳಿಗೆ ಸಹಕಾರಿಯಾಗುವಂತೆ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಪಕ್ಷಾತೀತವಾಗಿ ಹೋರಾಟ ನಡೆಸಬೇಕಾಗಿದೆ. ಶೀಘ್ರದಲ್ಲೇ ಕಾನೂನು ಸಚಿವರ ಜತೆ ಚರ್ಚೆ ನಡೆಸಲಾಗುವುದು ಎಂದು ಹೋರಾಟ ಸಮಿತಿ ಸಂಚಾಲಕ ಹಾಗೂ ಶಾಸಕ ಐವನ್ ಡಿಸೋಜ ಹೇಳಿದರು.


ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಮಂಗಳವಾರ ವಕೀಲರ ಸಂಘ, ಕಾನೂನು ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರ ಜತೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.


ಹುಬ್ಬಳ್ಳಿ-ಧಾರವಾಡ, ಕಲಬುರಗಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡಲಾಗಿದೆ. ಆದರೆ ಎಲ್ಲಾ ರೀತಿಯ ಸಂಪರ್ಕ ವ್ಯವಸ್ಥೆ ಇರುವ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರಾವಳಿಯಲ್ಲಿ ಪೀಠ ಸ್ಥಾಪನೆ ಅವಶ್ಯವಾಗಿ ಆಗಬೇಕಾಗಿದೆ. ಇದರಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ.


ಸೂಕ್ತ ಜಾಗ ಲಭ್ಯ: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಸೂಕ್ತ ಜಾಗ ಲಭ್ಯವಿದೆ. ಶೀಘ್ರದಲ್ಲೇ ಜಿಲ್ಲಾಧಿಕಾರಿ ಕಚೇರಿ ಪಡೀಲ್‌ಗೆ ಸ್ಥಳಾಂತರವಾದರೆ ಮೂರು ಮಹಡಿಯ ಕಟ್ಟಡ ಸಿಗಲಿದೆ. ಜೈಲು ನಗರ ಪ್ರದೇಶದಿಂದ ಹೊರಗೆ ಬಾಳೆಪುಣಿ ಗ್ರಾಮಕ್ಕೆ ಸ್ಥಳಾಂತರಗೊಂಡರೆ ಅಲ್ಲಿಯೂ ಜಾಗ ಇದೆ. ಎಸ್ಪಿ ಕಚೇರಿಯನ್ನು ಸ್ಥಳಾಂತರಿಸಿದರೆ ಬೇಕಾದಷ್ಟು ಜಾಗ ಲಭ್ಯವಾಗಲಿದೆ ಎಂದು ಐವನ್ ಡಿಸೋಜ ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಮಾತನಾಡಿ, ಮಂಗಳೂರಿನಲ್ಲಿ 2600 ವಕೀಲರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ವಕೀಲರಿಗೆ ಹೆಚ್ಚು ಅವಕಾಶಗಳು ಒದಗಿ ಬರಲಿದೆ. ಕೆಳ ನ್ಯಾಯಾಲಯಗಳ ಆದೇಶ ತೃಪ್ತಿಯಾಗದೆ ಇದ್ದಾಗ ಹೈಕೋರ್ಟ್‌ಗೆ ಅಫೀಲು ಸಲ್ಲಿಸಲು ಅವಕಾಶವಾಗಿ ನ್ಯಾಯ ಸಿಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಒತ್ತಡ ಹೇರುವ ಅವಶ್ಯಕತೆ ಇದೆ ಎಂದರು.


ಹಿರಿಯ ವಕೀಲ ಮೋನಪ್ಪ ಭಂಡಾರಿ ಮಾತನಾಡಿ, ಜಿಲ್ಲೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಬೆಂಗಳೂರಿಗೆ ಹೋಗುವ ಆರ್ಥಿಕ ಹೊರೆ ತಪ್ಪಲಿದೆ. ಸಾರ್ವಜನಿಕರು ಕೂಡಾ ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು.


ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಪೃಥ್ವೀರಾಜ್ ಮಾತನಾಡಿ, ಪೀಠ ಸ್ಥಾಪನೆಗೆ ಸಂಬಂಧಿಸಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ಗವರ್ನರ್ ಅವರಿಂದ ಕೇಂದ್ರ ಕಾನೂನು ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ಕೇಂದ್ರದಲ್ಲಿ ನಿರ್ಧಾರವಾಗಬೇಕು. ಪಾರ್ಲಿಮೆಂಟ್‌ನಲ್ಲೂ ಒತ್ತಡ ಹಾಕಬೇಕಾಗಿದೆ. ರಾಜ್ಯ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತದೆ ಎಂದರು.


ಎಸ್‌ಡಿಎಂ ಕಾನೂನು ಕಾಲೇಜು ಪ್ರಾಂಶುಪಾಲ ಡಾ.ತಾರಾನಾಥ, ವಕೀಲರಾದ ಆಶಾ ನಾಯಕ್, ಸುಜಿತ್ ಕುಮಾರ್, ಜ್ಯೋತಿ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net