

ಮಂಗಳೂರು: ಹವ್ಯಾಸಿ ಬಳಗ ಕದ್ರಿ ಮಂಗಳೂರು ಸಂಸ್ಥೆಯ 30 ವರ್ಷದ ವರ್ಷಾಚರಣೆಗಾಗಿ ‘ತ್ರಿಂಶತಿ ಸಂಭ್ರಮ ಜ.5ರಂದು ಸಂಜೆ 4ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ.
ಅಂದು ಸಂಜೆ 4ರಿಂದ ಜಿಲ್ಲೆಯ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಪ್ರಸಂಗ ‘ಶರಣಸುತ ತರಣಿಸೇನ’ ನಡೆಯಲಿದೆ. ಸಂಜೆ 6ಕ್ಕೆ ಸಭಾ ಕಾರ‌್ಯಕ್ರಮ ನಡೆಯಲಿದ್ದುಘಿ, ಅಗಲಿದ ನಮ್ಮ ಸಂಸ್ಥೆಯ ಕಲಾವಿದರಿಗೆ ನುಡಿನಮನ ಸಲ್ಲಿಸಲಾಗುತ್ತದೆ ಎಂದು ಎಂದು ಸಂಚಾಲಕ ಶರತ್ ಕುಮಾರ್ ಕದ್ರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯಕ್ಷಗಾನ ಇತಿಹಾಸದಲ್ಲಿ ಪ್ರಥಮಬಾರಿಗೆ ಕೀರ್ತಿಶೇಷ ಕಲಾವಿದರ ಧರ್ಮಪತ್ನಿಯರಾದ ಚಂದ್ರಾವತಿ ಪೆರುವಾಯಿ ನಾರಾಯಣ ಶೆಟ್ಟಿ, ಹೇಮಲತಾ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಜಯಂತಿ ಕುಂಬ್ಳೆ ಚಂದ್ರಶೇಖರ, ಗಿರಿಜಾವತಿ ಸಂಪಾಜೆ ಶೀನಪ್ಪ ರೈ, ವಾರಿಜಾ ಉದ್ಯಾವರ ಜಯಕುಮಾರ್ ಅವರಿಗೆ ‘ಯಕ್ಷಸುವಾಸಿನಿ’ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ.
ಹಿರಿಯ ವಿಶ್ರಾಂತ ಕಲಾವಿದರಾದ ಕೋಡಿ ಕುಷ್ಟ ಗಾಣಿಗರಿಗೆ ಯಕ್ಷಕೌಶಿಕೆ ಪ್ರಶಸ್ತಿ, ಶ್ರೀಕಟೀಲು ರಮಾನಂದ ರಾವ್ ಅವರಿಗೆ ಯಕ್ಷ ತುಂಬುರ ಪ್ರಶಸ್ತಿ, ಕೊಕ್ಕಡ ಈಶ್ವರ ಭಟ್ ಅವರಿಗೆ ಯಕ್ಷ ಸೌಗಂಧಿಕೆ ಪ್ರಶಸ್ತಿ’ ಯೊಂದಿಗೆ ಯಕ್ಷಸಾಧಕರಾದ ಮುರಲಿ ಕಡೆಕಾರ್, ನಿಡ್ಲೆ ಗೋವಿಂದ ಭಟ್, ಉಜಿರೆ ಅಶೋಕ ಭಟ್, ಸಂಜಯ ಕುಮಾರ್ ರಾವ್ ಪಲಿಮಾರು, ಚೇವಾರು ಶಂಕರ ಕಾಮತ್ ಅವರಿಗೆ ಯಕ್ಷ ಸನ್ಮಾನ ನಡೆಯಲಿದೆ. ಇದರ ಜತೆಗೆ ಯಕ್ಷ ಗೌರವಾಭಿನಂದನೆ ಕಾರ‌್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರಸಿದ್ಧ ವಾಸ್ತುತಜ್ಞ ರಾಜಕುಮಾರ್ ಕುಲಶೇಖರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಪೊಲ್ಯ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಡನೀರು ಸಂಸ್ಥಾನದ ಶ್ರೀಸಚ್ಚಿದಾನಂದ ಸ್ವಾಮೀಜಿ, ವೇದಮೂರ್ತಿ ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣ, ಟಿ. ಶ್ಯಾಮ್ ಭಟ್, ಕಲ್ಲಾಡಿ ದೇವಿ ಪ್ರಸಾದ ಶೆಟ್ಟಿ, ಡಾ. ಮೋಹನ್ ಆಳ್ವ, ಮೇಯರ್ ಮನೋಜ್ ಕುಮಾರ್ ಭಾಗವಹಿಸಲಿದ್ದಾರೆ. ರಾತ್ರಿ ಗಂಟೆ 8ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ರಾಜಾ ದಂಡಕ ಎಂಬ ಪುರಾಣ ಪುಣ್ಯ ಆಖ್ಯಾನವು ನಡೆಯಲಿದೆ ಎಂದರು.
ಈ ಸಂದರ್ಭ ಡಾ.ವಂಸತಕುಮಾರ್ ಶೆಟ್ಟಿ, ಕೆ.ಚಂದ್ರಶೇಖರ ಶೆಟ್ಟಿ, ಪಿ.ಎ.ಪೂಜಾರಿ, ಡಾ.ಮೀನಾಕ್ಷಿ ರಾಮಚಂದ್ರ ಉಪಸ್ಥಿತರಿದ್ದರು.