

ಮಂಗಳೂರು: ರಾಜ್ಯ ಸರ್ಕಾರ ಡ್ರಗ್ಸ್ ಜಾಲದ ವಿರುದ್ಧ ಗಂಭೀರವಾಗಿ ಪರಿಗಣಿಸಿದ್ದು, ಪೂರೈಕೆ ಮತ್ತು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಶನಿವಾರ ಪೊಲೀಸ್ ವಸತಿಗೃಹ ಹಾಗೂ ನೂತನ ಠಾಣಾ ಕಟ್ಟಡಗಳ ಉದ್ಘಾಟನೆ ನೆರವೇರಿಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಡ್ರಗ್ಸ್ ಹಾವಳಿ ಬಗ್ಗೆ ಸದನದಲ್ಲಿ ನಾನು ಮತ್ತು ಮುಖ್ಯಮಂತ್ರಿ ಮಾತನಾಡಿದ್ದೇವೆ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 250 ಕೋಟಿ ರೂ. ಮೌಲ್ಯದ ಡ್ರಗ್ಸ್‌ನ್ನು ವಶಪಡಿಸಿ ನಾಶಪಡಿಸಲಾಗಿದೆ. ಡ್ರಗ್ಸ್ ಜಾಲದ ಹಿಂದಿನ ಶಕ್ತಿಗಳನ್ನು ಮಟ್ಟಹಾಕುವ ಕೆಲಸ ನಡೆಯುತ್ತಿದೆ. ಈ ಜಾಲದ ಹಿಂದೆ ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಆಗಮಿಸುವ ವಿದೇಶಿ ವಿದ್ಯಾರ್ಥಿಗಳ ಕೈವಾಡವೂ ಪತ್ತೆಯಾಗುತ್ತಿದ್ದು, ಅಂತಹವರ ಬಗ್ಗೆ ಆಯಾ ದೇಶಗಳ ರಾಯಭಾರ ಕಚೇರಿಗೆ ಮಾಹಿತಿ ನೀಡಿ ಅವರನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ಕಡೆಗಳಲ್ಲಿ ಗೂಂಡಾ ಕಾಯ್ದೆ ಹಾಕಿದ್ದು, ಈ ವಿಚಾರದಲ್ಲಿ ಯಾವುದೇ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ ಎಂದರು.
ಡ್ರಗ್ಸ್ ಪತ್ತೆಯಾದರೆ ಪೊಲೀಸರೇ ಹೊಣೆ
ಡ್ರಗ್ಸ್ ದಂಧೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸರ್ಕಾರ ಪಣ ತೊಟ್ಟಿದೆ. ಅದಕ್ಕಾಗಿ ಪೊಲೀಸರು ಶಕ್ತಿಮೀರಿ ಶ್ರಮಿಸಬೇಕು. ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ಇದರ ಹೊರತೂ ಡ್ರಗ್ಸ್ ದಂಧೆ ಪತ್ತೆಯಾದರೆ ಅದಕ್ಕೆ ಆಯಾ ಠಾಣೆ ಹಾಗೂ ಸಂಬಂಧಪಟ್ಟ ಪೊಲೀಸರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವ ಡಾ.ಪರಮೇಶ್ವರ ಎಚ್ಚರಿಕೆ ನೀಡಿದರು.
ನಕ್ಸಲರು ಶರಣಾಗತಿಗೆ ಅವಕಾಶವಿದೆ
ವಿಕ್ರಂ ಗೌಡನ ಹತ್ಯೆ ಬಳಿಕ ನಕ್ಸಲರ ಹಾದಿ ಕಠಿಣವಾಗಿದೆ. ಆತನ ಸಹಚರರಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ಶರಣಾಗುವಂತೆ ಅವಕಾಶ ನೀಡಲಾಗಿದೆ. ಶರಣಾಗುವ ನಕ್ಸಲರಿಗೆ ಸರ್ಕಾರದಿಂದ ಜೀವನಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದು, ಶರಣಾಗುವಂತೆ ನಕ್ಸಲರಿಗೆ ಅರಣ್ಯಗಳಲ್ಲಿ ಕೂಂಬಿಂಗ್ ನಿರತ ಪೊಲೀಸ್ ಪಡೆ ಆಹ್ವಾನ ನೀಡಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ, ಸಂಪುಟ ಪುನರ್ ರಚನೆ ಕುರಿತ ಪ್ರಶ್ನೆಗೆ ಡಾ.ಪರಮೇಶ್ವರ್, ಇವೆರಡು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಸಚಿವ ಪರಮೇಶ್ವರ ಪ್ರತಿಕ್ರಿಯಿಸಿದರು.
ಮುಸ್ಲಿಂ ವೋಟ್ ಬ್ಯಾನ್ ಹೇಳಿಕೆ ನೀಡಿದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಕಾನೂನು ಪ್ರಕಾರ ಕ್ರಮ ಆಗಲಿದೆ. ಕಾನೂನಿನ ಎದುರು ನಾನು ಸೇರಿದಂತೆ ಎಲ್ಲರೂ ಸಮಾನರು. ಚಂದ್ರಶೇಖರನಾಥ ಸ್ವಾಮೀಜಿ ಕೂಡ ಕಾನೂನು ಎದುರು ದೊಡ್ಡವರಲ್ಲ. ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನೇ ಪೊಲೀಸ್ ಇಲಾಖೆ ಮಾಡುತ್ತದೆ. ಅವರ ಬಂಧನ ಪ್ರಕ್ರಿಯೆ ಬಗ್ಗೆ ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್‌ನಲ್ಲಿ ಅಪಸ್ವರವಿಲ್ಲ
ಹಾಸನದಲ್ಲಿ ಕಾಂಗ್ರೆಸ್ ನಡೆಸುವ ಸ್ವಾಭಿಮಾನ ಸಮಾವೇಶಕ್ಕೆ ಅಸಮಾಧಾನದ ಅನಾಮಧೇಯ ಪತ್ರದ ಕುರಿತಂತೆ ಮಾತನಾಡಿದ ಡಾ.ಪರಮೇಶ್ವರ, ಸಮಾವೇಶಕ್ಕೆ ಯಾರ ಅಸಮಾಧಾನವೂ ಇಲ್ಲ. ಅನಾಮಧೇಯ ಪತ್ರವನ್ನು ಬಿಜೆಪಿಯವರು ಯಾಕೆ ಬರೆಯಬಾರದು ಎಂದು ಪ್ರಶ್ನಿಸಿದರು. ನಮ್ಮಲ್ಲಿ ಯಾವುದೇ ಅಪಸ್ವರ ಇಲ್ಲ. ನಾನು ತುಮಕೂರಿನಲ್ಲಿ ಸಮಾವೇಶ ಮಾಡಲು ಹೊರಟಿದ್ದೆ. ಆದರೆ ನಮಗೆ ಬೇರೆ ಕಾರ್ಯಕ್ರಮ ಕೊಟ್ಟಿದ್ದಾರೆ. ಹಾಸನದಲ್ಲಿ ಪಕ್ಷದಿಂದಲೇ ಸ್ವಾಭಿಮಾನಿ ಸಮಾವೇಶ ಮಾಡುತ್ತಿದ್ದೇವೆ. ಬೇರೆ ಬೇರೆ ಜನರು ನಮಗೆ ಸಹಕಾರ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.