19 ರಂದು ರಾಮಕೃಷ್ಣ ಮಠದಲ್ಲಿ ಹರಿಕಥಾ ಸಮ್ಮೇಳನ 2025

hari
Published on

ಮಂಗಳೂರು: ಹರಿಕಥಾ ಪರಿಷತ್ ಮಂಗಳೂರು, ರಾಮಕೃಷ್ಣ ಮಠ ಮತ್ತು ಬೆಂಗಳೂರಿನ ಷಡ್ಜ ಕಲಾ ಕೇಂದ್ರ ಟ್ರಸ್ಟ್ ಸಹಯೋಗದಲ್ಲಿ ‘ಹರಿಕಥಾ ಸಮ್ಮೇಳನ-2025’ ಮಂಗಳಾದೇವಿ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಜ.19ರಂದು ಬೆಳಗ್ಗೆ 8ರಿಂದ ರಾತ್ರಿ 7ರವರೆಗೆ ಜರುಗಲಿದೆ.

ಬೆಳಗ್ಗೆ 8ರಿಂದ ಸಂಕೀರ್ತನಾ ಮೆರವಣಿಗೆ, ದಾಸ ಸಂಕೀರ್ತನೆ, 9.30ರಿಂದ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದಜೀ ಮಹಾರಾಜ್ ಉದ್ಘಾಟಿಸಲಿದ್ದಾರೆ. ಮಂಗಳೂರು ಹರಿಕಥಾ ಪರಿಷತ್ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ ಸಮ್ಮೇಳನದ ಸರ್ವಾಧ್ಯಕ್ಷರಾಗಿರುತ್ತಾರೆ ಎಂದು ಸಮ್ಮೇಳನ ಸಮಿತಿಯ ಅಧ್ಯಕ್ಷ ಕ್ಯಾ. ಗಣೇಶ್ ಕಾರ್ಣಿಕ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಡಾ. ಎಂ.ಪ್ರಭಾಕರ ಜೋಷಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಂಸದರು, ಶಾಸಕರು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ‘ಹರಿಕಥಾ ಪರಂಪರೆಯ ಪುನರುತ್ಥಾನ’ ಸಮ್ಮೇಳನದ ಧ್ಯೇಯವಾಗಿರುತ್ತದೆ ಎಂದವರು ತಿಳಿಸಿದರು.

10.40ಕ್ಕೆ ‘ತುಳುನಾಡಿನ ಹರಿಕಥಾ ಪರಂಪರೆ’ ವಿಷಯದಲ್ಲಿ ಗೋಷ್ಠಿ ನಡೆಯಲಿದೆ. 11.45ಕ್ಕೆ ಪ್ರಣಮ್ಯ ಕೆ.ಎಸ್. ಅವರಿಂದ ಹರಿಕಥೆ, 12.15ಕ್ಕೆ ‘ಹರಿಕಥೆಯಲ್ಲಿ ಪೀಠಿಕೆ, ಉಪಕಥೆ, ಸಂಗೀತ ಮತ್ತು ಜೀವನ ಮೌಲ್ಯಗಳು’ ವಿಷಯದಲ್ಲಿ ಗೋಷ್ಠಿ, ಅಪರಾಹ್ನ 1.45ಕ್ಕೆ ಪೂಜಾ ವಾಸುದೇವ ಐಲ ಅವರಿಂದ ಹರಿಕಥೆ, 2.15ಕ್ಕೆ ‘ಹಳೆಬೇರು-ಹೊಸಚಿಗುರು’ ಹಿರಿಯ ಹರಿದಾಸಹೊಂದಿಗೆ ಯುವ ಹರಿಕಥಾಭ್ಯಾಸಿಗಳ ಸಂವಾದ, 2.45ಕ್ಕೆ ಹಿರಿಯ ಹರಿದಾಸರಾದ ಆಚಾರ್ಯ ಡಿ. ಶ್ರೀಧರದಾಸ್ ಜೀ ಕುಂಭಾಶಿ, ಹಿರಿಯ ಮಹಿಳಾ ಹರಿದಾಸರಾದ ರುಕ್ಮಿಣಿ ಹಂಡೆ ಉಡುಪಿ, ಹಿರಿಯ ತಬ್ಲಾ ವಾದಕ ಎಂ.ಲಕ್ಷ್ಮೀನಾರಾಯಣ ಭಟ್ ಮಂಗಳೂರು, ಹಿರಿಯ ಹಾರ್ಮೋನಿಯಂ ವಾದಕಿ ಶೈಲಶ್ರೀ ಕಾಮತ್ ಬಿಜೈ ಮತ್ತು ಕೀರ್ತನ ಕುಟೀರ ಕುಂಬ್ಳೆ ಅವರಿಗೆ ಗೌರವಾಭಿನಂದನೆ, ಅಪರಾಹ್ನ 3.15ಕ್ಕೆ ‘ಹರಿಕಥಾ ಕಲೆಯ ಪುನರುತ್ಥಾನದ ಸವಾಲುಗಳು’ ಗೋಷ್ಠಿ, 4.30ಕ್ಕೆ ಕಲಾಶ್ರೀ ಡಾ. ಲಕ್ಷ್ಮಣದಾಸ ತುಮಕೂರು ಅವರಿಂದ ಹರಿಕಥೆ ನಡೆಯಲಿದೆ. ಸಂಜೆ 5.30ರಿಂದ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರು ಸಮ್ಮೇಳನದ ನಡಾವಳಿ ಕೈಪಿಡಿ ‘ಅರ್ಪಣೆ’ ಬಿಡುಗಡೆಗೊಳಿಸಲಿದ್ದಾರೆ ಎಂದು ಕ್ಯಾ.ಕಾರ್ಣಿಕ್ ವಿವರಿಸಿದರು.

ಸಮಿತಿಯ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಕಾರ್ಯಾಧ್ಯಕ್ಷ ಬೆಟ್ಟಂಪಾಡಿ ಸುಂದರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ.ಎಸ್.ಪಿ.ಗುರುದಾಸ್, ಕೋಶಾಧಿಕಾರಿ ಬಿ.ನಾರಾಯಣ ರಾವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net