

ಮಂಗಳೂರು: ಗಣೇಶೋತ್ಸವ ಆಚರಣೆ ಮೂಲಕ ಸಮಸ್ತ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯ ನಡೆಯುತ್ತಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಹಿಂದೂ ಯುವ ಸೇನಾ ಆಶ್ರಯದಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ 32ನೇ ವರ್ಷದ ಮಂಗಳೂರು ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಗಣೇಶೋತ್ಸವ ಆಯೋಜನೆಯಿಂದ ಹಿಂದು ಸಮಾಜ ಒಟ್ಟಾಗಿ ಒಂದೆಡೆ ಸೇರುವಂತಾಗಿದೆ. ಗಣಪತಿ ಉತ್ಸವದ ಮೂಲಕ ಸಮಾಜದಲ್ಲಿ ಧರ್ಮದ ಕಾರ್ಯ, ಹಿಂದುತ್ವ ಹಾಗೂ ಧಾರ್ಮಿಕತೆಯ ಜಾಗೃತಿ ಮೂಡುತ್ತಿದೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ‘ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಸಾರ್ವಜನಿಕ ಗಣೇಶೋತ್ಸವಕ್ಕೆ ಅಡ್ಡಿ ಪಡಿಸುವ ವ್ಯವಸ್ಥಿತ ಷಡ್ಯಂತ್ರವನ್ನು ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಮೂಲಕ ನಡೆಸಿದೆ. ಆದರೆ ಹಿಂದು ಸಮಾಜ ಇದಕ್ಕೆ ಜಗ್ಗದೆ ಅದ್ದೂರಿಯಾಗಿ ಗಣೇಶೋತ್ಸವವನ್ನು ಸಂಘಟಿಸಿದೆ ಎಂದರು.
ಮಂಗಳೂರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್, ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಉಪಾಧ್ಯಕ್ಷರಾದ ಉಮೇಶ್ ಪೈ, ನಾಗರಾಜ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.