ಸಾವಯವ ಕೃಷಿಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು-ಗಡ್ಡೆ ಗೆಣಸು ಸಮಾರೋಪದಲ್ಲಿ ಒಡಿಯೂರು ಶ್ರೀ ಆಶಯ

mng--5 Jan Gadde genasu
Published on

ಮಂಗಳೂರು: ಆರೋಗ್ಯಯುವ ಜೀವನ ಕಾಯ್ದುಕೊಳ್ಳಲು ಸಾವಯವ ಕೃಷಿಗೆ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು, ಕೇಶವ ಸ್ಮೃತಿ ಸಂವರ್ಧನ ಸಮಿತಿ, ಶ್ರೀ ಸರಸ್ವತಿ ಚಾರಿಟೆಬಲ್ ಟ್ರಸ್ಟ್, ಕಂದಮೂಲ ಬಳಗ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸಂಘನಿಕೇತನದಲ್ಲಿ ನಡೆದ ಎರಡು ದಿನಗಳ ‘ಕಂದಮೂಲ ಅಂತರ್‌ರಾಜ್ಯ ಗಡ್ಡೆ ಗೆಣಸು ಮೇಳದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಆಶೀರ್ವಚನ ನೀಡಿದರು.

ಪ್ರಸ್ತುತ ಗಡ್ಡೆ ಗೆಣಸುಗಳನ್ನು ಮರೆತಿದ್ದೇವೆ. ಹಾಗಾಗಿ ಹೊಟ್ಟೆಯಲ್ಲಿ ಗೆಡ್ಡೆ ಉಂಟಾಗುತ್ತಿದೆ. ಆರೋಗ್ಯ, ಆಯುಷ್ಯ, ಆಧ್ಯಾತ್ಮಿಕತೆ ಸೇರಿದಾಗ ಭವ್ಯ ಭಾರತ ನಿರ್ಮಾಣ ಸಾಧ್ಯ. ಋಷಿ ಹಾಗೂ ಕೃಷಿ ಪರಂಪರೆ ಅವಶ್ಯ. ಈ ಮೇಳದಲ್ಲಿ ಅವೆರಡೂ ಮೇಳೈಸಿದೆ ಎಂದು ಸ್ವಾಮೀಜಿ ಹೇಳಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮುಖ್ಯ ಅತಿಥಿಯಾಗಿದ್ದರು. ಬ್ರಿಟಿಷರು ಬಂದ ನಂತರ ಅವರ ಮಾತುಗಳನ್ನು ನಂಬಿ ಗೆಡ್ಡೆಗೆಣಸು, ಸೊಪ್ಪು ತಿನ್ನುವುದನ್ನು ಬಿಟ್ಟೆವು. ನಮ್ಮ ಆಹಾರ ಪದ್ಧತಿಯಾಗಿ ಸಂಸ್ಕೃತಿಯನ್ನೂ ಬ್ರಿಟಿಷರು ಕಸಿದರು. ಅವರ ವೈಭವದ ಜೀವನಕ್ಕೆ ನಮ್ಮ ದೇಶದ ಸಸ್ಯ ಸಂಪತ್ತನ್ನು ನಾಶ ಮಾಡಿ ದೇಶವನ್ನು ಬಡತನಕ್ಕೆ ತಳ್ಳಿದರು. ನಮ್ಮ ಪೂರ್ವಜರ ವಿಷಮುಕ್ತ ಆಹಾರ ಪದ್ಧತಿ, ಸಂಸ್ಕೃತಿಯನ್ನು ಅನುಸರಿಸುವ ದೊಡ್ಡ ಕಾರ್ಯ ನಡೆಯಬೇಕು ಎಂದರು.

ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ನಗರದಲ್ಲಿ ಮೊದಲ ಬಾರಿಗೆ ಆಯೋಜಿಸಿದ ಗಡ್ಡೆ ಗೆಣಸು ಮೇಳ ಅನೇಕ ಗಡ್ಡೆ ಹಾಗೂ ಸೊಪ್ಪುಗಳನ್ನು ಪರಿಚಯಿಸಿದೆ. ಇಂತಹ ಮೇಳಗಳು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ನಡೆದಾಗ ನಮ್ಮ ಆರೋಗ್ಯಕರ ಆಹಾರ ಮುಂದಿನ ಪೀಳಿಗೆಗೆ ಪರಿಚಯವಾಗಲು ಸಾಧ್ಯ ಎಂದರು.

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮೇಯರ್ ಮನೋಜ್ ಕುಮಾರ್ ಹಾಗೂ ಮೈಸೂರಿನ ಸಹಜ ಸೀಡ್ಸ್ ರೈತ ಉತ್ಪಾದಕ ಸಂಸ್ಥೆಯ ಸಂಸ್ಥಾಪಕ ಕೃಷ್ಣಪ್ರಸಾದ್, ಕುಟುಂಬ ವೈದ್ಯ ಡಾ.ಅಣ್ಣಯ್ಯ ಕುಲಾಲ್ ಅತಿಥಿಗಳಾಗಿ ಶುಭ ಹಾರೈಸಿದರು.

ಕಂದಮೂಲ ಅಧ್ಯಕ್ಷ ಎಸ್.ಎ.ಪ್ರಭಾಕರ ಶರ್ಮ, ಕಾರ್ಯಾಧ್ಯಕ್ಷರಾದ ಜಿ.ಆರ್.ಪ್ರಸಾದ್, ಎಸ್.ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರಿದ್ದರು. ಕಂದಮೂಲ ಪ್ರ.ಕಾರ್ಯದರ್ಶಿ ರತ್ನಾಕರ ಕುಳಾಯಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಮಾಯಾ ಕೆ. ನಿರೂಪಿಸಿದರು.

ಸಾಧಕರಿಗೆ ಸನ್ಮಾನ:

ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ, ಗೆಡ್ಡೆ ಗೆಣಸು ಮೇಳದಲ್ಲಿ ಪ್ರಧಾನ ಆಕರ್ಷಣೆಯಾಗಿದ್ದ ಟ್ಯೂಬರ್ ಮ್ಯಾನ್ ಆಫ್ ಕೇರಳ ಎಂದೇ ಖ್ಯಾತರಾದ ಶಾಜಿ, ವೈವಿಧ್ಯಮಯ 200ಕ್ಕೂ ಅಧಿಕ ಗೆಡ್ಡೆಗಳನ್ನು ಬೆಳೆಯುತ್ತಿರುವ ಜೋಸೆಫ್ ರೆಜಿ, ಸಾವಯವ ಕೃಷಿಯಲ್ಲಿ ಸಾಧನೆಗೈದ ಸುಪ್ರೀತ್ ಪಿರಿಯಾಪಟ್ಟಣ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಭಾಗವಾಗಿ ಆಯೋಜಿಸಿದ್ದ ಅಂಚೆ ಕಾರ್ಡಿನಲ್ಲಿ ಚಿತ್ರ ಬರೆಯುವುದು, ಪ್ರಬಂಧ ಸ್ಪರ್ಧಾ ವಿಜೇತರಿಗೆ ಹಾಗೂ ಸೊಪ್ಪು ಬೆಳೆಸುವ ಸ್ಪರ್ಧೆಯಲ್ಲಿ ವಿಜೇತರಾದ ಶ್ರೀಹರಿ ದರ್ಬೆ ಪ್ರಥಮ, ದೇವಿಕಾ ದ್ವಿತೀಯ, ಸರೋಜ ಪ್ರಕಾಶ್ ತೃತೀಯ ಅವರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ ವಿವಿಧ ರಾಜ್ಯ, ಜಿಲ್ಲೆಗಳಿಂದ ಬಂದ ಕೃಷಿಕರನ್ನೂ ಗೌರವಿಸಲಾಯಿತು.

ಅಭೂತಪೂರ್ವ ಸ್ಪಂದನೆ : ಗಡ್ಡೆ ಗೆಣಸು ಮೇಳಕ್ಕೆ ಭಾನುವಾರ ಬೆಳಗ್ಗೆಯಿಂದ ಸಂಜೆಯ ತನಕ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದರು. ಸಂಘನಿಕೇತನದ ನಾಲ್ಕನೇ ಮಹಡಿಯಲ್ಲಿ ನಡೆದ ಮೇಳದಲ್ಲಿ 150ಕ್ಕೂ ಅಧಿಕ ಸೊಪ್ಪು, 350ಕ್ಕೂ ಅಧಿಕ ಗಡ್ಡೆ ಗೆಣಸುಗಳನ್ನು ಕುಟುಂಬ ಸಮೇತ ಬಂದು ಖರೀದಿಸಿದರು. ಮೇಳ ಮುಗಿಯುವ ಮೊದಲೇ ಬಹುತೇಕ ಸ್ಟಾಲ್‌ಗಳಲ್ಲಿ ವಸ್ತುಗಳು ಖಾಲಿಯಾಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net