ಪ್ರತಿಷ್ಠಿತ ಕಂಪನಿಯೊಂದರ ಹೆಸರಿನಲ್ಲಿ ನಕಲಿ ಲಿಕ್ವಿಡ್ ಉತ್ಪಾದನೆ ಆರೋಪಿ ಬಂಧನ

mng---9 Aug Dalram
Published on

ಮಂಗಳೂರು: ಪ್ರತಿಷ್ಠಿತ ಕಂಪನಿಯೊಂದರ ಹೆಸರಿನಲ್ಲಿ ನಕಲಿ ಗುಡ್‌ನೈಟ್ ಗೋಲ್ಡ್ ್ಲಾಶ್ ಲಿಕ್ವಿಡ್ ಉತ್ಪಾದಿಸಿ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂದರು ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.


ಮೂಲತಃ ಗುಜರಾತ್, ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿರುವ ಅಂಗಡಿ ಮಾಲೀಕ ದಲ್ರಾಮ್ (33) ಪ್ರಕರಣದ ಆರೋಪಿ.


ಈತ ನಗರದ ಬಂದರು ಬೀಬಿ ಅಲಾಬಿ ರಸ್ತೆಯಲ್ಲಿರುವ ಜೈ ವಿಹಾತ್ ಎಂಟರ್‌ಪ್ರೈಸಸ್ ಹೆಸರಿನ ಶಾಪ್‌ನಲ್ಲಿ ಅಕ್ರಮವಾಗಿ ನಕಲಿ ಲಿಕ್ವಿಡ್ ಮಾರಾಟ ಮಾಡುತ್ತಿದ್ದ. ಇದನ್ನು ಸಂಬಂಧಪಟ್ಟ ಕಂಪನಿಯ ಪ್ರತಿನಿಧಿಗಳು ಗ್ರಾಹಕರ ಸೋಗಿನಲ್ಲಿ ಶಾಪ್‌ಗೆ ತೆರಳಿ ಪರಿಶೀಲನೆ ನಡೆಸಿದ್ದರು. ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಖಚಿತವಾಗುತ್ತಿದ್ದಂತೆ ಬೆಂಗಳೂರಿನ ಕಂಪನಿಯ ಪ್ರತಿನಿಧಿ ಕಾರ್ತಿಕ್ ಎಂಬವರು ಬಂದರು ಠಾಣೆಗೆ ದೂರು ನೀಡಿದ್ದರು.
ಆರೋಪಿ ಏನು ಮಾಡುತ್ತಿದ್ದ: ಆರೋಪಿಯು ಸೊಳ್ಳೆ ನಿರೋಧಕ ಲಿಕ್ವಿಡ್‌ನ್ನು ಅಕ್ರಮವಾಗಿ ಉತ್ಪಾದಿಸಿ ಪ್ರತಿಷ್ಠಿತ ಕಂಪನಿ ಹೆಸರಲ್ಲಿ ಮಾರಾಟ ಮಾಡುತ್ತಿದ್ದ. ಈ ಉತ್ಪನ್ನ ಎಲ್ಲಿ ಉತ್ಪಾದನೆಯಾಗುತ್ತಿತ್ತು ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ. ವಶಪಡಿಸಿಕೊಂಡ ಸೊತ್ತುಗಳು ಆ.1ರಿಂದ 5ರನಡುವೆ ಉತ್ಪಾದಿಸಲಾಗಿದೆ ಎಂದು ತಿಳಿದು ಬಂದಿದೆ.


ನಗರ ಕೇಂದ್ರ ಉಪವಿಭಾಗದ ಎಸಿಪಿ ಪ್ರತಾಪ್ ಸಿಂಗ್ ತೋರಟ್, ಉತ್ತರ ಠಾಣಾ ಇನ್‌ಸ್ಪೆಕ್ಟರ್ ಅಮ್ಜದ್ ಆಲಿ, ಬಂದರು ಠಾಣಾ ಎಸ್‌ಐ ಮಂಜುಳಾ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ ನಕಲಿ ಸೊತ್ತುಗಳ ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಆರೋಪಿಯನ್ನು ಕೇಸು ದಾಖಲಿಸಿ ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net