ಹೊಲದಲ್ಲಿ ಚಿನ್ನದ ಬಿಸ್ಕೆಟ್ ಸಿಕ್ಕಿವೆ ಎಂದು ನಂಬಿಸಿ ನಕಲಿ ಚಿನ್ನ ನೀಡಿ 4 ಲಕ್ಷ ರೂ. ವಂಚನೆ

Fruad
Published on

ಮಂಗಳೂರು: ಹೊಲದಲ್ಲಿ ಚಿನ್ನದ ಬಿಸ್ಕೆಟ್ ಸಿಕ್ಕಿವೆ ಎಂದು ನಂಬಿಸಿ, ವ್ಯಕ್ತಿಯೊಬ್ಬರಿಂದ 4 ಲಕ್ಷ ರೂ. ಪಡೆದು ನಕಲಿ ಚಿನ್ನವನ್ನು ನೀಡಿ ವಂಚಿಸಿರುವ ಕುರಿತಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಳ್ಳೂರು ಮೂಲದ ಪ್ರಸ್ತುತ ಅಶೋಕನಗರ ರಂಗಪ್ಪ ಬೋವಿ ನೆಕ್ಕಿಲ್‌ನಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಅವರಿಗೆ ಕರೆ ಮಾಡಿ ಜಮೀನಲ್ಲಿ ಚಿನ್ನದ ಬಿಸ್ಕೆಟ್ ಸಿಕ್ಕಿದ್ದು, 10 ಲಕ್ಷ ರೂ. ಗೆ ನೀಡುತ್ತೇನೆ ಎಂದು ತಿಳಿಸಿದ್ದಾನೆ. ಅದೇ ದಿನ ಮಧ್ಯಾಹ್ನ ತನ್ನ ಹೆಂಡತಿಯೊಂದಿಗೆ ಆತ ದೂರುದಾರರ ಮನೆಗೆ ಬಂದಿದ್ದು, ಮಾತುಕತೆ ವೇಳೆ ಅವರು 8 ಲಕ್ಷ ರೂ.ಗೆ ನೀಡುವುದಾಗಿ ತಿಳಿಸಿದ್ದರು. ಚಿನ್ನದ ಅಸಲಿಯತ್ತು ತಿಳಿದುಕೊಳ್ಳಲು .05 ಮಿ.ಗ್ರಾಂ. ಚಿನ್ನವನ್ನು ದೂರುದಾರರಿಗೆ ಕೊಟ್ಟಿದ್ದಾನೆ. ಕರೆ ಮಾಡಿದ್ದ ವ್ಯಕ್ತಿ ನನಗೆ ಹಣದ ಅವಶ್ಯಕತೆ ಇದೆ ಎಂದು 4 ಲಕ್ಷ ರೂ. ಕೊಡುವಂತೆ ತಿಳಿಸಿದ್ದಾನೆ. ವ್ಯವಹಾರದ ಉದ್ದೇಶಕ್ಕೆ ಹಲವು ಬಾರಿ ಆತ ಮನೆಗೆ ಭೇಟಿ ನೀಡಿದ್ದು, ಅಂತಿಮವಾಗಿ ನಕಲಿ ಚಿನ್ನವನ್ನು ನೀಡಿ 4 ಲಕ್ಷ ರೂ. ಹಣವನ್ನು ಪಡೆದು ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net