ಎಕ್ಸ್‌ಪರ್ಟ್ ಇ-ಲರ್ನ್ ಆ್ಯಪ್ ಲೋಕಾರ್ಪಣೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ದಿಕ್ಸೂಚಿ ಕೆ.ಉಲ್ಲಾಸ್ ಕಾಮತ್ ಬಣ್ಣನೆ

mng-aug24-expert 3
Published on

ಮಂಗಳೂರು: ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯು ಅಭಿವೃದ್ಧಿ ಪಡಿಸಿದ ಎಕ್ಸ್‌ಪರ್ಟ್ ಇ-ಲರ್ನ್, ಕೃತಕ ಬುದ್ದಿಮತ್ತೆ ಆಧಾರಿತ ‘ಇಝಿ’ (ಉಘ) ಹಾಗೂ ವಿಸ್ತೃತ ಅಧ್ಯಯನದ ‘ಎಕ್ಸ್‌ಪೆಡಿಷನ್’ ಎಂಬ ಮೂರು ಹೊಸ ಆವಿಷ್ಕಾರವನ್ನು ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ ಶನಿವಾರ ಲೋಕಾರ್ಪಣೆಗೊಳಿಸಿದೆ.


ಯುಕೆ ಆ್ಯಂಡ್ ಕಂಪೆನಿಯ ಸ್ಥಾಪಕ ಕೆ.ಉಲ್ಲಾಸ್ ಕಾಮತ್ ಕಾರ್ಯಕ್ರಮ ಉದ್ಘಾಟಿಸಿ, ಆ್ಯಪ್ ಬಿಡುಗಡೆಗೊಳಿಸಿದರು. ಮಂಗಳೂರು ಶಿಕ್ಷಣ ಕಾಶಿಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಅವಶ್ಯ. ಈ ನಿಟ್ಟಿನಲ್ಲಿ ಎಕ್ಸ್‌ಪರ್ಟ್ ಸಂಸ್ಥೆ ರೂಪಿಸಿದ ಇ-ಲರ್ನ್ ಆ್ಯಪ್ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಹೊಸ ದಿಕ್ಸೂಚಿಯಾಗಲಿದೆ ಎಂದರು.


ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಮುಖ್ಯ ಅತಿಥಿಯಾಗಿದ್ದರು. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಬಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೂ ತಂತ್ರಜ್ಞಾನ ಉಪಯೋಗಿಸಿ ಹೊಸ ಆವಿಷ್ಕಾರ ನಡೆಸುವ ಅಗತ್ಯ ಇದೆ ಎಂದರು.


ಡಬ್ಲುೃಆರ್‌ಕೆ ಡಬ್ಲುೃಆರ್‌ಕೆ 99 ಗೇಮ್ಸ್ ಹಾಗೂ ರೋಬೋಸಾಫ್ಟ್‌ನ ಸ್ಥಾಪಕ ರೋಹಿತ್ ಭಟ್ ಅತಿಥಿಯಾಗಿದ್ದರು. ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆ ಆವಿಷ್ಕರಿಸಿದ ಇ-ಲರ್ನ್ ಆ್ಯಪ್ ಜ್ಞಾನದ ತಳಹದಿಯಲ್ಲಿ ತಯಾರಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಲಾಭವಾಗಲಿದೆ ಎಂದರು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಶಿಕ್ಷಕರೇ ಜೀವಾಳ. ಅವರಿಂದಾಗಿ ನಾವು ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ. ತಂತ್ರಜ್ಞಾನ ಆಧಾರಿತ ಇಂದಿನ ದಿನಗಳಲ್ಲಿ ಎಕ್ಸ್‌ಪರ್ಟ್ ಇ-ಲರ್ನ್ ಅಪ್ಲಿಕೇಷನ್ ಶೈಕ್ಷಣಿಕ ಮೈಲುಗಲ್ಲಾಗಲಿದೆ ಎಂದರು.


ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ನಾಯಕ್ ಮಾತನಾಡಿ, ಕೋವಿಡ್ 19 ಸಂದರ್ಭ ಆನ್‌ಲೈನ್ ತರಗತಿ ಅನಿವಾರ್ಯವಾದ ವೇಳೆ ಎಕ್ಸ್‌ಪರ್ಟ್ ಇ-ಲರ್ನ್ ಅಪ್ಲಿಕೇಷನ್ ಯಶಸ್ವಿಯಾಗಿ ನಿಭಾಯಿಸಿದ ಅಂಕುಶ್ ಎನ್.ನಾಯಕ್, ನಿರಂತರ ಸಂಶೋಧನೆ ನಡೆಸಿ ಇ-ಲರ್ನ್ ಆಂಡ್ರಾಯ್ಡಾ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು.


ಸಂಸ್ಥೆಯ ಐಟಿ ನಿರ್ದೇಶಕ ಅಂಕುಶ್ ಎನ್.ನಾಯಕ್ ಇ-ಲರ್ನ್ ಆ್ಯಪ್ ಬಗ್ಗೆ ಮಾಹಿತಿ ನೀಡಿದರು. ಆ್ಯಂಡ್ರಾಯ್ಡಾ ಆಧರಿತ ಎಕ್ಸ್‌ಪರ್ಟ್ ಇ-ಲರ್ನ್ ಆ್ಯಪ್ ನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ಹಾಗೂ ಎಕ್ಸ್‌ಪರ್ಟ್ ಕೋಚಿಂಗ್ ಕ್ಲಾಸ್‌ನ ವಿದ್ಯಾರ್ಥಿಗಳಿಗೆ ಪೂರೈಸಿದರೆ, ಮಂದಿನ ಶೈಕ್ಷಣಿಕ ವರ್ಷದಿಂದ ಮುಕ್ತ ಮಾರುಕಟ್ಟೆಗೆ ಪೂರೈಸಲಾಗುವುದು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದರ ಲಾಭ ಪಡೆದುಕೊಳ್ಳಬಹುದು.


ಪ್ರತಿ ವಿಷಯದಲ್ಲಿ ಸುಮಾರು 10 ನಿಮಿಷಗಳ ವಿಡಿಯೋ ಇದ್ದು, ವಿಡಿಯೋ ಪಾಠದ ನಡುವೆ ವಿದ್ಯಾರ್ಥಿಗಳಿಗೆ ಕೃತಕ ಬುದ್ದಿಮತ್ತೆಯು ಪ್ರಶ್ನೆಯನ್ನು ಕೇಳುತ್ತದೆ. ಪ್ರಶ್ನೆಗೆ ಉತ್ತರ ಕೊಟ್ಟರೆ ಮಾತ್ರ ವಿಡಿಯೋ ಮತ್ತೆ ಮುಂದುವರಿಯುತ್ತದೆ. ಇಲ್ಲದಿದ್ದರೆ ಮತ್ತೆ ಮೊದಲಿನಿಂದ ಪ್ಲೇ ಮಾಡಿ ಮನನ ಮಾಡಬೇಕು. ಹೀಗೆ ಒಂದರ್ಥದಲ್ಲಿ ತರಗತಿಯಲ್ಲಿ ಅಧ್ಯಾಪಕರು ಪ್ರಶ್ನೆ ಕೇಳಿದಂತೆ ಇಲ್ಲೂ ಕೇಳಲಾಗುತ್ತದೆ ಎಂದರು.


ಟ್ಯಾಬ್ ಸುರಕ್ಷಿತ:
ವಿದ್ಯಾರ್ಥಿಗಳಿಗೆ ನೀಡುವ ಟ್ಯಾಬ್ ಸುರಕ್ಷಿತವಾಗಿದ್ದು, ಎಕ್ಸ್‌ಪರ್ಟ್‌ನ ಇ-ಲರ್ನ್ ಆ್ಯಪ್ ಹೊರತುಪಡಿಸಿ ಇತರ ಯಾವುದೇ ಆ್ಯಪ್ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ. ಇದನ್ನು ಎಕ್ಸ್‌ಪರ್ಟ್‌ನ ಸರ್ವರ್ ಕೊಠಡಿಯಲ್ಲಿ ಸಂಪೂರ್ಣ ಮಾನಿಟರ್ ಮಾಡಲಾಗುತ್ತದೆ. ಮಕ್ಕಳಲ್ಲಿ ಶಿಸ್ತು ಕಾಪಾಡುವ ಉದ್ದೇಶದಿಂದ ಹಾಗೂ ಆರೋಗ್ಯ ದೃಷ್ಟಿಯಿಂದ ರಾತ್ರಿ 11ರಿಂದ ಮುಂಜಾನೆ 5 ಗಂಟೆಯವರೆಗೆ ಸ್ಕ್ರೀನ್ ಸಂಪೂರ್ಣ ಆಫ್ ಆಗುತ್ತದೆ. ಈ ವೇಳೆ ಕೇವಲ ಅಲಾರ್ಮ್ ಮಾತ್ರ ಕೆಲಸ ಮಾಡುತ್ತದೆ.


ಕೃತಕ ಬುದ್ಧಿಮತ್ತೆ
ಎಕ್ಸ್‌ಪರ್ಟ್‌ನ ಇಝಿ ಎಂಬುದು ಕೃತಕ ಬುದ್ದಿಮತ್ತೆ ಆಧಾರಿತವಾಗಿರುವುದರಿಂದ ವಿದ್ಯಾರ್ಥಿಗಳು ತಮ್ಮ ಸಂದೇಹವನ್ನು ಟೈಪ್ ಮಾಡಿ ಕೇಳಿದಾಗ, ವಿಡಿಯೋ, ನೋಟ್ಸ್ ವಿವರಣೆಯನ್ನು ಉದಾಹರಣೆ ಸಹಿತ ವಿವರಿಸಲಾಗುತ್ತದೆ. ಇದು ಎನ್‌ಸಿಆರ್‌ಟಿ ಮತ್ತು ಎಕ್ಸ್‌ಪರ್ಟ್ ಪಬ್ಲಿಷಿಂಗ್ ಹೌಸ್ ಹೊರತಂದಿರುವ ಪುಸ್ತಕಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತದೆ. ಇದು ಇತರ ಸರ್ಚ್ ಎಂಜಿನ್‌ಗಿಂತ ಹೆಚ್ಚು ನಿಖರವಾದ ಉತ್ತರವನ್ನು ನೀಡುತ್ತದೆ. ಮಾದರಿ ಪ್ರಶ್ನೆಗಳಿಗೆ ಉತ್ತರಿಸಿದರೆ ತಕ್ಷಣ ಮೌಲ್ಯಮಾಪನ ಮಾಡಲಾಗುತ್ತದೆ. ಕೀ ಉತ್ತರಗಳನ್ನು ನೀಡುತ್ತದೆ.


ಎಕ್ಸ್‌ಪೆಡಿಷನ್:
ಮಕ್ಕಳು ದೊಡ್ಡವರಾಗುತ್ತಿದ್ದಂತೆ ಪ್ರಶ್ನಿಸುವ ಮನೋಭಾವ ಹಾಗೂ ಕುತೂಹಲದಿಂದ ನೋಡುವ ಆಸಕ್ತಿ ಕಡಿಮೆಯಾಗುತ್ತದೆ. ಇದನ್ನು ನಿರಂತರವಾಗಿಸುವ ಉದ್ದೇಶದಿಂದ ಪಠ್ಯದ ವಿಭಿನ್ನ ರೀತಿಯ ಪ್ರಸ್ತುತತೆಯೇ ಎಕ್ಸ್‌ಪೆಡಿಷನ್. ಫಿಸಿಕ್ಸ್, ಕೆಮೆಸ್ಟ್ರೀ, ಬಯಾಲಜಿ, ಮ್ಯಾತ್ಸ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸ್ಟಾಟಿಸ್ಟಿಕ್ಸ್, ಇಂಗ್ಲಿಷ್, ಕನ್ನಡ, ಸಂಸ್ಕೃತ, ಹಿಂದಿ ವಿಷಯದಲ್ಲೂ ಈ ಪ್ರಯೋಗ ಮಾಡಲಾಗಿದೆ. ಇದು ಪುಸ್ತಕ ರೂಪದಲ್ಲಿ ಎಲ್ಲರಿಗೆ ದೊರೆತರೆ, ಡಿಜಿಟಲ್ ಮಾದರಿಯಲ್ಲಿ ಎಕ್ಸ್‌ಪರ್ಟ್ ಇ-ಲರ್ನ್ ಆ್ಯಪ್‌ನಲ್ಲಿ ದೊರೆಯಲಿದೆ ಎಂದು ಅಂಕುಶ್ ನಾಯಕ್ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net