ದಿಗಂತ್ ನಾಪತ್ತೆಯಾಗಲು ಪರೀಕ್ಷೆ ಭಯ ಕಾರಣ - ರಿಮಾಂಡ್ ಹೋಮ್‌ಗೆ ಶಿಫ್ಟ್ - 12ರಂದು ಹೈಕೋರ್ಟ್‌ಗೆ ಹಾಜರ್ - ದ.ಕ.ಎಸ್ಪಿ ಮಾಹಿತಿ

mng--9 March Sp press
Published on

ಮಂಗಳೂರು: ಫರಂಗಿಪೇಟೆಯ ದಿಗಂತ್ ಮನೆ ತೊರೆದು ಏಕಾಏಕಿ ನಾಪತ್ತೆಯಾಲು ಪರೀಕ್ಷೆಯ ಭಯ ಕಾರಣ. ಶನಿವಾರ ಉಡುಪಿಯಲ್ಲಿ ಪತ್ತೆಯಾದ ಆತನೇ ಈ ಮಾಹಿತಿ ಬಹಿರಂಗಪಡಿಸಿದ್ದು, ಪ್ರಸ್ತುತ ಆತನನ್ನು ಬೋಂದೆಲ್‌ನ ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಯತೀಶ್ ಎನ್.ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ.25ರಂದು ಮನೆಯಿಂದ ನಾಪತ್ತೆಯಾದ ದಿಗಂತ್ 11 ದಿನಗಳ ಬಳಿಕ ಪತ್ತೆಯಾಗಿದ್ದ. ಬಳಿಕ ಆತನನ್ನು ಪೊಲೀಸರು ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ತನ್ನನ್ನು ಯಾರೋ ಅಪಹರಿಸಿದ್ದಾರೆ ಎಂದು ಹೇಳಿದ್ದ ದಿಗಂತ್, ಬಳಿಕ ಪೊಲೀಸರ ವಿಚಾರಣೆ ವೇಳೆ, ದ್ವಿತೀಯ ಪಿಯು ಪರೀಕ್ಷೆಯ ಒತ್ತಡಕ್ಕೆ ಒಳಗಾಗಿ, ಭೀತಿಯಿಂದ ನಾಪತ್ತೆಯಾಗಿರುವುದಾಗಿ ಸ್ಪಷ್ಟಪಡಿಸಿದ್ದಾನೆ. ಆತನನ್ನು ಪ್ರಾಥಮಿಕ ವಿಚಾರಣೆ ನಡೆಸಿ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಮುಂದೆ ಹಾಜರುಪಡಿಸಿ ಬೊಂದೇಲ್‌ನ ಬಾಲಕರ ಮಂದಿರಕ್ಕೆ ಹಸ್ತಾಂತರಿಸಲಾಗಿದೆ. ಈ ಮಧ್ಯೆ, ಬಾಲಕನ ನಾಪತ್ತೆ ಬಗ್ಗೆ ಹೈಕೋರ್ಟ್‌ಗೆ ಆತನ ಹೆತ್ತವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವುದರಿಂದ ಆತನನ್ನು ಮಾ.12ರಂದು ಬೆಂಗಳೂರಲ್ಲಿ ಹೈಕೋರ್ಟ್‌ಗೆ ಹಾಜರುಪಡಿಸಲಾಗುವುದು. ಬಳಿಕ ನ್ಯಾಯಾಲಯ ನಿರ್ದೇಶನದಂತೆ ಆತನ ಮನೆಗೆ ಅಥವಾ ಹಾಸ್ಟೆಲ್‌ಗೆ ಕಳುಹಿಸಲಾಗುವುದು. ಅಲ್ಲಿವರೆಗೆ ಆತ ಬಾಲಮಂದಿರದಲ್ಲೇ ಇರಲಿದ್ದು, ಆತನಿಗೆ ತಜ್ಞರು ಕೌನ್ಸಿಲಿಂಗ್ ನಡೆಸಲಿದ್ದಾರೆ ಎಂದರು.

* ಶಿವಮೊಗ್ಗ, ಮೈಸೂರಿಗೂ ಹೋಗಿದ್ದ: ಸಮೀಪದ ಆಂಜನೇಯ ದೇವಸ್ಥಾನಕ್ಕೆ ಹೋಗುವುದಾಗಿ ಕಿದೆಬೆಟ್ಟು ಮನೆಯಿಂದ ಹೊರಟ ದಿಗಂತ್, ಏಕಾಂಗಿಯಾಗಿ ನೇರವಾಗಿ ರೈಲ್ವೆ ಹಳಿಯಲ್ಲಿ ಮುನ್ನಡೆದಿದ್ದ. ಅರ್ಕುಳದಲ್ಲಿ ಹಳಿಯಲ್ಲೇ ಮೊಬೈಲ್, ಬೂಟು, ವಾಚನ್ನು ಬಿಟ್ಟು ಮುಖ್ಯರಸ್ತೆಗೆ ಬಂದಿದ್ದ. ರಾತ್ರಿ ವೇಳೆ ಯಾರದೋ ಬೈಕನ್ನು ಏರಿ ಮಂಗಳೂರಿನ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ತಲುಪಿದ್ದ. ಅಲ್ಲಿ ರಾತ್ರಿಯೇ ಖಾಸಗಿ ಬಸ್‌ನಲ್ಲಿ ಶಿವಮೊಗ್ಗಕ್ಕೆ ತೆರಳಿದ್ದ. 500 ರೂ. ತೆಗೆದುಕೊಂಡು ಊರೂರು ಸುತ್ತಿದ್ದಾನೆ. ಮರುದಿನ ಶಿವಮೊಗ್ಗದಿಂದ ರೈಲಿನಲ್ಲಿ ಟಿಕೆಟ್ ಪಡೆಯದೆ, ಮೈಸೂರು ಮೂಲಕ ಕೆಂಗೇರಿಗೆ ಸಂಚರಿಸಿದ್ದ. ಅಷ್ಟರಲ್ಲಿ ಆತನ ಪಾಕೆಟ್‌ನಲ್ಲಿದ್ದ ಹಣ ಖಾಲಿಯಾಗಿತ್ತು. ಬೇರೆ ಹಣ ಇಲ್ಲದೆ ಆತ ಅಲ್ಲಿ ರೈಲು ಇಳಿದು ನಂದಿಬೆಟ್ಟಕ್ಕೆ ಯಾರದೋ ಬೈಕ್‌ನಲ್ಲಿ ಡ್ರಾಪ್ ಪಡೆದಿದ್ದ. ಅಲ್ಲಲ್ಲಿ ಸ್ವಲ್ಪ ದೂರ ನಡೆದುಕೊಂಡೇ ಹೋಗಿದ್ದ. ನಂದಿಬೆಟ್ಟದಲ್ಲಿ ಖಾಸಗಿ ರೆಸಾರ್ಟ್‌ನಲ್ಲಿ ಎರಡು ದಿನ ಕೆಲಸ ಮಾಡಿ ಸ್ವಲ್ಪ ಹಣ ಸಂಪಾದಿಸಿದ್ದ.

ಮತ್ತೆ ಕೆಂಗೇರಿಗೆ ತೆರಳಿ ಶುಕ್ರವಾರ ರಾತ್ರಿ ಮುರ್ಡೇಶ್ವರ ರೈಲು ಏರಿದ್ದ. ಈ ರೈಲಿನಲ್ಲಿ ಶನಿವಾರ ಬೆಳಗ್ಗೆ ಉಡುಪಿ ತಲುಪಿದ್ದ. ಆಗ ಆತ ದುಡಿದಿದ್ದ ಹಣ ಖರ್ಚಾಗಿದ್ದು, ಊಟ ಹಾಗೂ ಬಟ್ಟೆ ಖರೀದಿಗೆ ಮಧ್ಯಾಹ್ನ ಉಡುಪಿಯ ಖಾಸಗಿ ಮಾರ್ಟ್‌ಗೆ ಬಂದಿದ್ದ. ಅಲ್ಲಿ ಖರೀದಿಗೆ ಯತ್ನಿಸಿ ದುಡ್ಡಿಲ್ಲದೆ ವಾಪಸ್ ಹೋಗಲು ಯತ್ನಿಸಿದಾಗ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಉಡುಪಿ ಪೊಲೀಸರು ಆತನನ್ನು ವಶಕ್ಕೆ ಪಡೆದು, ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಅವರು ವಿವರಿಸಿದರು.

ಹೆಚ್ಚುವರಿ ಎಸ್ಪಿ ರಾಜೇಂದ್ರ ಡಿಎಸ್., ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್, ಇನ್‌ಸ್ಪೆಕ್ಟರ್ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ಪೊಲೀಸರ ಹುಡುಕಾಟವನ್ನೂ ನೋಡಿದ್ದ!

ನಂದಿಬೆಟ್ಟ ರೆಸಾರ್ಟ್‌ನಲ್ಲಿ ಮೂರು ದಿನ ದುಡಿದು 3 ಸಾವಿರ ರೂ.ಸಂಪಾದಿಸಿದ್ದ ದಿಗಂತ್, ಉಡುಪಿಗೆ ಬರಲು ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲು ಏರಿದ್ದ. ಶನಿವಾರ ಬೆಳಗ್ಗೆ ಫರಂಗಿಪೇಟೆಯಲ್ಲಿ ರೈಲಿನಲ್ಲಿ ಹೋಗುತ್ತಿದ್ದಾಗ ಪೊಲೀಸರು ಆತನ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿರುವುದನ್ನು ನೋಡಿದ್ದ ಎಂದು ಎಸ್ಪಿ ಹೇಳಿದರು. ರೈಲಿನ ಕಿಟಕಿ ಬಳಿ ನಿಂತು ತನ್ನ ಮನೆಯನ್ನು ಗಮನಿಸಿದ್ದ. ರೈಲಿನ ಟ್ರಾೃಕ್ ಸುತ್ತಮುತ್ತ ಡ್ರೋನ್ ಹಾರಾಟ, ಪೊಲೀಸರ ಹುಡುಕಾಟವನ್ನೂ ಗಮನಿಸಿದ್ದ. ಈ ವೇಳೆ ಪೊಲೀಸರು ಮನೆ ಬಳಿಯ ಕೆರೆಯಲ್ಲೂ ಈತನ ಪತ್ತೆಗೆ ಹುಡುಕಾಟ ನಡೆಸುತ್ತಿದ್ದರು. ಇದನ್ನು ರೈಲಿನಿಂದಲೇ ದಿಗಂತ್ ನೋಡಿದ್ದ. ಮನೆಯಿಂದ ಹೊರಟು ರೈಲು ಹಳಿಯಲ್ಲಿ ಸಾಗುತ್ತಿದ್ದಾಗ ಆತನ ಕಾಲಿಗೆ ಗಾಯವಾಗಿತ್ತು. ಅದೇ ರಕ್ತ ಚಪ್ಪಲಿಯಲ್ಲಿ ಅಂಟಿಕೊಂಡಿತ್ತು. ಹಾಗಾಗಿ ಚಪ್ಪಲಿಯನ್ನು ಅಲ್ಲೇ ಬಿಟ್ಟೆ ಎಂದು ಪೊಲೀಸರಲ್ಲಿ ತಿಳಿಸಿದ್ದಾಗಿ ಎಸ್ಪಿ ಹೇಳಿದರು.

ಗೊತ್ತು ಗುರಿ ಇಲ್ಲದೆ!

ನಾಪತ್ತೆಯಾದ ಹನ್ನೊಂದು ದಿನಗಳಲ್ಲಿ ಆತ ಯಾರನ್ನೂ ಸಂಪರ್ಕಿಸಿಲ್ಲ. ಗೊತ್ತುಗುರಿ ಇಲ್ಲದೆ ಹೋಗುತ್ತಿದ್ದ. ಕಲಿಕೆಯಲ್ಲಿ ದಿಗಂತ್ ಹುಷಾರಿದ್ದ. ಆದರೆ ಪರೀಕ್ಷೆ ಕಾರಣಕ್ಕೆ ಕೆಲವು ದಿನಗಳಿಂದ ಚಿಂತಿತನಾಗಿದ್ದ. ಅದೇ ಕಾರಣ ಆತ ಮನೆಯಿಂದ ಹೊರಗೆ ಹೋಗಿದ್ದಾನೆ ಎಂದು ಎಸ್ಪಿ ವಿವರಿಸಿದರು.

ದಿಗಂತ್ ಪತ್ತೆಗೆ ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ಪಟ್ಟಿದೆ. ಏಳು ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದೇವೆ. ಸ್ಥಳೀಯ ಸಿಸಿ ಕ್ಯಾಮರಾಗಳನ್ನು ಚೆಕ್ ಮಾಡಿದ್ದೇವೆ. ನದಿಯಲ್ಲೂ ಹುಡುಕಾಡಿದ್ದು, ಡ್ರೋನ್ ಬಳಸಿಯೂ ಸರ್ಚ್ ಮಾಡಿದ್ದೇವೆ. ಫರಂಗಿಪೇಟೆ ಪರಿಸರದಲ್ಲಿ 2-3 ಬಾರಿ ಹುಡುಕಾಡಿದ್ದೆವು. ಆತನನ್ನು ಯಾರಾದರೂ ಸಂಪರ್ಕಿಸುತ್ತಿದ್ದಾರೆಯೇ ಅಥವಾ ಆತ ಮನೆಮಂದಿಯನ್ನು ಸಂಪರ್ಕ ಮಾಡುತ್ತಾನೆಯೇ ಎಂದು ಗಮನಿಸುತ್ತಿದ್ದೆವು.

- ಯತೀಶ್ ಎನ್.

ಎಸ್ಪಿ, ದ.ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net