

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಮುಂಬೈ ಬಂಟರ ಸಂಘದ ಸಹಯೋಗದಲ್ಲಿ ಮುಂಬೈಯ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜಾಗತಿಕ ಮಟ್ಟದ ವಿಶ್ವ ಬಂಟರ ಸಮಾಗಮ ಬೃಹತ್ ಕಾರ್ಯಕ್ರಮ ಡಿ.7 ರಂದು ನಡೆಯಲಿದೆ.
ಈ ಬೃಹತ್ ಕಾರ್ಯಕ್ರಮವನ್ನು ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಒಕ್ಕೂಟದ ವಿಶೇಷ ಮಹಾ ನಿರ್ದೇಶಕ, ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಸಿಎಂಡಿ ತೋನ್ಸೆ ಆನಂದ ಎಂ ಶೆಟ್ಟಿ, ಮುಂಬೈ ಹೇರಂಭ ಇಂಡಸ್ಟ್ರೀಸ್ ನ ಅಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಪಾಲ್ಗೊಳ್ಳಲಿದ್ದು ಹಾಗೂ ಪ್ರತಿಷ್ಠಿತ ಉದ್ಯಮಿಗಳು ಸಮಾಜ ಸೇವಕರು ಜಗತ್ತಿನ ವಿವಿಧ ಬಂಟ ಸಂಘಗಳ ಅಧ್ಯಕ್ಷರು ಸೇರಿಕೊಳ್ಳಲಿದ್ದಾರೆ ಎಂದು ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ ನಡೆಯಲಿರುವ ಸಮಾರೋಪದಲ್ಲಿ ಎಂಆರ್‌ಜಿ ಗ್ರೂಪ್‌ನ ಆಡಳಿತ ನಿರ್ದೇಶಕ ಡಾ.ಕೆ.ಪ್ರಕಾಶ್ ಶೆಟ್ಟಿ ಪಾಲ್ಗೊಳ್ಳುವರು. ವಿಶ್ವದ ಬಂಟರ ಸಂಘಗಳ ನೂತನ ಅಧ್ಯಕ್ಷರುಗಳಿಗೆ ಸನ್ಮಾನ ನಡೆಯಲಿದೆ. ಮುಂಬೈ ಮಹಾನಗರದ ಬಂಟರ ಸಂಘಗಳಿಗೆ ನೃತ್ಯ ಸ್ಪರ್ಧೆ ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ವಿಶ್ವದಾದ್ಯಂತ ಇರುವ ಬಂಟರ ಸಂಘಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಗುವುದು. ಸಿನಿಮಾ ತಾರೆಯರು, ಧಾರ್ಮಿಕ ಮುಖಂಡರು, ಉದ್ಯಮಿಗಳು, ರಾಜಕೀಯ ಮುಖಂಡರು, ಕೈಗಾರಿಕೋದ್ಯಮಿಗಳು, ಭಾಗವಹಿಸಲಿದ್ದಾರೆ. ನೃತ್ಯ ಸ್ಪರ್ಧೆಯ ಜೊತೆಗೆ ಆದರ್ಶದಂಪತಿ, ಮಿಸ್ಟರ್ ಬಂಟ್, ಮಿಸ್ ಬಂಟ್ ಕಾರ್ಯಕ್ರಮವೂ ಇದೆ. ಬೆಳಗ್ಗೆಯಿಂದ ರಾತ್ರಿವರೆಗೆ ನಡೆಯುವ ಕಾರ್ಯಕ್ರಮಾದಲ್ಲಿ ಸುಮಾರು 5 ಸಾವಿರಕ್ಕೂ ಮಿಕ್ಕಿದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.
ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜತೆ ಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ ಮೊದಲಾದವರಿದ್ದರು.