ದಕ್ಷಿಣ ಕನ್ನಡ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಶನ್ ನೂತನ ಸ್ವಂತ ಕಚೇರಿ ಉದ್ಘಾಟನೆ

wine
Published on

ಮಂಗಳೂರು: ಕೊಟ್ಟಾರಚೌಕಿಯ ಉದ್ಭವ್ ಸ್ಕ್ವೇರ್‌ನ ಎರಡನೇ ಮಹಡಿಯಲ್ಲಿ ನೂತನವಾಗಿ ನಿರ್ಮಿಸಲಾದ ದ.ಕ. ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಶನ್ ಇದರ ನೂತನ ಸ್ವಂತ ಕಚೇರಿ ಉದ್ಘಾಟನೆ ಕಾರ್ಯಕ್ರಮ ಸೋಮವಾರ ನಡೆಯಿತು.


ಕಚೇರಿ ಉದ್ಘಾಟಿಸಿದ ಎಜೆ ಸಮೂಹ ಸಂಸ್ಥೆಗಳ ಚೇರ್‌ಮೆನ್ ಡಾ. ಎ.ಜೆ. ಶೆಟ್ಟಿ ಅವರು ಮಾತನಾಡಿ, ಅಸೋಸಿಯೇಶನ್ ಇಲ್ಲದ ಕಾಲದಲ್ಲಿ ಕೆಲಸ ಕಾರ್ಯಗಳಿಗೆ ಪರದಾಡಬೇಕಾದ ಕಾಲವಿತ್ತು. ಆದರೆ ಇಂದು ಅಸೋಸಿಯೇಶನ್ ಮೂಲಕ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲು ಸಾಧ್ಯವಾಗುತ್ತವೆ. ಅಸೋಸಿಯೇಶನ್ ಗಟ್ಟಿಗೊಳಿಸಿ ಉತ್ತಮವಾಗಿ ನಡೆದುಕೊಂಡು ಹೋಗಲು ಶ್ರಮಿಸಬೇಕು ಎಂದ ಅವರು ಉದ್ಯಮ ಎಲ್ಲರಿಗೂ ಲಾಭದಾಯಕವಾಗಲಿ. ಅಸೋಸಿಯೇಶನ್ ಆರಂಭಿಸಿರುವ ನೂತನ ಕಚೇರಿ ಉತ್ತರೋತ್ತರ ಪ್ರಗತಿಯೊಂದಿಗೆ ಬೆಳೆದು ಸಮಾಜಕ್ಕೆ ಒಳಿತನ್ನು ನೀಡಲಿ ಎಂದರು.


ಗ್ರೂಪ್ಸ್ ಆ್ ಹೋಟೆಲ್ ಕ್ವಾಲಿಟಿ ಕುಡ್ಲ ಇದರ ಎಂಡಿ ಡಾ.ಎ. ಸದಾನಂದ ಶೆಟ್ಟಿ ಮಾತನಾಡಿ, ಮದ್ಯ ವ್ಯಾಪಾರ ಸಾವಿರಾರು ಸವಾಲುಗಳನ್ನು ಒಳಗೊಂಡಿದೆ. ಸಂಘದವರಿಗೆ ಅಣ್ಣನಂತೆ ನಿಂತು ಕೆಲಸ ಮುಂದುವರೆಸುವೆ. ಸ್ವಂತ ಕಚೇರಿ ಆರಂಭವಾಗಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಸಂಘಟಿತರಾಗಿ ಕೆಲಸ ಮಾಡೋಣ ಎಂದರು.


ಎಂಆರ್‌ಜಿ ಸಮೂಹ ಸಂಸ್ಥೆಗಳ ಚೇರ್‌ಮೆನ್ ಡಾ. ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ಮದ್ಯ ವ್ಯಾಪಾರಿಗಳು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೋಟೆಲ್, ಮದ್ಯ ವ್ಯಾಪಾರದ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಕೆಲಸ ಮಾಡುತ್ತಿದ್ದು, ನಾವು ನಮ್ಮ ಸವಲತ್ತುಗಳಿಗೆ ಹೋರಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉದ್ಯಮ ನಡೆಸುವುದು ಕಷ್ಟಕರವಾಗಲಿದೆ ಎಂದರು.


ಸಾಯಿ ಪ್ಯಾಲೆಸ್ ಸಮೂಹ ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ರವಿ ಸುಂದರ್ ಶೆಟ್ಟಿ ಮಾತನಾಡಿ, ಅಸೋಸಿಯೇಶನ್ ಗಟ್ಟಿಯಾದಂತೆ ಸಮಸ್ಯೆ ಎದುರಿಸಲು ಸಾಧ್ಯವಿದೆ. ವೈಯುಕ್ತಿಕವಾಗಿ ಹೋರಾಡುವುದು ಸುಲಭವಲ್ಲ. ಆದರೆ ಅಸೋಸಿಯೇಷನ್ ಮೂಲಕ ಇದು ಸಾಧ್ಯ. ಸಂಘ ನಮಗೆ ಏನು ಮಾಡಿದೆ ಎನ್ನುವುದಕ್ಕಿಂತ ನಾವು ಸಂಘಕ್ಕೆ ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ಪ್ರಶ್ನೆ ಮಾಡುವುದನ್ನು ಬಿಟ್ಟು ಒಟ್ಟಾಗಿ ಒಂದಾಗಿ ಮುನ್ನಡೆಯೋಣ ಎಂದರು.


ಸುವರ್ಣ ಸಮೂಹ ಸಂಸ್ಥೆಗಳ ಚೇರ್‌ಮೆನ್ ಡಾ. ಉದಯ್‌ಚಂದ್ರ ಡಿ. ಸುವರ್ಣ, ಕರ್ನಾಟಕ ರಾಜ್ಯ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದ ರಾಜ್ ಹೆಗ್ಡೆ ಉಡುಪಿ ಶುಭ ಹಾರೈಸಿದರು.


ದ.ಕ. ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಎಂ. ಗಣೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಿ.ಎನ್. ಅಪ್ಪಚ್ಚು, ಉಪಾಧ್ಯಕ್ಷರಾದ ಜೆ. ಲೂವಿಸ್ ಪಿಂಟೊ, ನಾರಾಯಣ ಪಿ.ಎಂ., ವಿನೋದ್ ಪುತ್ತೂರು, ಕೋಶಾಧಿಕಾರಿ ಚಂದ್ರನಾಥ ಅತ್ತಾವರ, ಕಾರ್ಯದರ್ಶಿ ಓಂಪ್ರಸಾದ್ ಬರ್ದಿಲ, ಮಂಗಳೂರು ತಾಲೂಕು ಅಧ್ಯಕ್ಷ ಕೆ.ಟಿ. ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.


ಸಮಾರಂಭದಲ್ಲಿ ಗಣ್ಯರನ್ನು ಹಾಗೂ ವಿಶೇಷ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸಮ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಎಂ. ಗಣೇಶ್ ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷರಾದ ಜೆ. ಲೂವಿಸ್ ಪಿಂಟೊ ಸಂಘದ ಪ್ರಾಸ್ತಾವಿಸಿದರು. ನಾರಾಯಣ ಪಿ.ಎಂ. ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.


ಹವಾ ನಿಯಂತ್ರಿತ ಕಚೇರಿ
ನೂತನ ಕಚೇರಿಯು ಸಂಪೂರ್ಣ ಹವಾ ನಿಯಂತ್ರಿತವಾಗಿದ್ದು, ಸುಸಜ್ಜಿತ ವ್ಯವಸ್ಥೆಗಳಿಂದ ಕೂಡಿದೆ. ಪ್ರತ್ಯೇಕ ಮೀಟಿಂಗ್ ಹಾಲ್, ಆನ್‌ಲೈನ್ ಮೀಟಿಂಗ್ ಕೊಠಡಿ, ಅಧ್ಯಕ್ಷರ ಕೊಠಡಿ ಸೇರಿದಂತೆ ಸದಸ್ಯರಿಗೆ ಯಾವುದೇ ಸಂದರ್ಭದಲ್ಲಿ ಸೇವೆ ಒದಗಿಸಲು ಕಚೇರಿ ಮೂಲಕ ಸಂಘ ಸಿದ್ದವಿದೆ. ದ.ಕ. ಜಿಲ್ಲಾ ಸನ್ನದುದಾರರಿಗೆ ಯಾವುದೇ ಸಮಸ್ಯೆಗಳು ಎದುರಾದಲ್ಲಿ ಸಂಘದ ಕಚೇರಿ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಅಧ್ಯಕ್ಷ ಎಂ.ಗಣೇಶ್ ಶೆಟ್ಟಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net