ದಡ್ಡಲ್‌ಕಾಡ್ ಕೋಟೆಕಣಿಯಲ್ಲಿ ಮನೆ ದರೋಡೆ ವೃದ್ಧ ದಂಪತಿಯ ಕಟ್ಟಿ ಹಾಕಿ ನಗ, ನಗದು ದೋಚಿದ ತಂಡ

mng--9 july theft urva 2
Published on

ಮಂಗಳೂರು: ಮಂಗಳೂರಿನಲ್ಲಿ ಮನೆ ದರೋಡೆ ಸರಣಿ ಮುಂದುವರಿದಿದೆ. ಮಂಗಳವಾರ ನಸುಕಿನ ಜಾವ ಉರ್ವಾಸ್ಟೋರ್‌ನ ದಡ್ಡಲ್‌ಕಾಡ್ ಬಳಿ ಮನೆಗೆ ನುಗ್ಗಿದ ದರೋಡೆಕೋರರು ಮನೆಯವರನ್ನು ಕಟ್ಟಿಹಾಕಿ ನಗ, ನಗದು ದರೋಡೆ ಮಾಡಿ ಮನೆಯವರ ಕಾರಿನಲ್ಲಿ ಪರಾರಿಯಾಗಿದ್ದಾರೆ. ಕಾರನ್ನುಮೂಲ್ಕಿಯಲ್ಲಿ ಬಿಟ್ಟು ಹೋಗಿದ್ದು, ಪೊಲೀಸರು ವಶಪಡಿಸಿದ್ದಾರೆ.


ಕಾಪಿಕಾಡು ಬಳಿಯ ಕೋಟೆಕಣಿ ಎಂಬಲ್ಲಿ ವಿಕ್ಟರ್ ಮೆಂಡೋನ್ಸಾ(71) ಮತ್ತು ಪ್ಯಾಟ್ರಿಷಾ ಮೆಂಡೋನ್ಸಾ(60) ಎಂಬವರ ಮನೆಗೆ ನಸುಕಿನ 1.50ರ ಸುಮಾರಿಗೆ ಬೆಡ್ ರೂಂ ನ ಕಿಟಕಿಯ ರಾಡ್ ಕಟ್ ಮಾಡಿ ಮನೆಗೆ ನುಗ್ಗಿದ ನಾಲ್ವರು ದರೋಡೆಕೋರರ ತಂಡ ಮನೆಯಲ್ಲಿದ್ದ ದಂಪತಿ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ದಂಪತಿ ಬೊಬ್ಬಿಟ್ಟರೂ ಯಾರಿಗೂ ಹೊರಗಿನವರಿಗೆ ಕೇಳಿಸಿರಲಿಲ್ಲ. ಬಳಿಕ ಮನೆಯ ಬೀರು, ಕಪಾಟು ತಡಕಾಡಿ ಕಳ್ಳತನ ಮಾಡಿ ಪರಾರಿಯಾಗಿದೆ.
ಹಲ್ಲೆಗೊಳಗಾದ ವಿಕ್ಟರ್ ಮೆಂಡೋನ್ಸಾ(71), ಪ್ಯಾಟ್ರಿಷಾ ಮೆಂಡೋನ್ಸಾ(60) ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಸ್ಥಳಕ್ಕೆ ಡಿ.ಸಿ.ಪಿ ದಿನೇಶ್ ಕುಮಾರ್, ಉರ್ವಾ ಠಾಣೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಬೆರಳಚ್ಚು, ವಿಧಿ ವಿಜ್ಞಾನ ತಜ್ಞರ ತಂಡದಿಂದ ಪರಿಶೀಲನೆ ನಡೆದಿದೆ. ಅಲ್ಲದೆ ದರೋಡೆಯಾದ ಮನೆಯ ಸುತ್ತಮುತ್ತಲಿನ, ರಸ್ತೆ, ಹೆದ್ದಾರಿಯ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ದರೋಡೆಕೋರರ ಪತ್ತೆಗೆ ಶೋಧ ನಡೆಸಲಾಗುತ್ತಿದೆ.


ಮನೆಯಲ್ಲಿ ಹಿರಿಯ ದಂಪತಿ ಇಬ್ಬರೇ ಇದ್ದು, ಅವರ ಮಕ್ಕಳು ವಿದೇಶದಲ್ಲಿದ್ದಾರೆ. ಮನೆಯವರಿಗೆ ಮಾರಕಾಯುಧ ತೋರಿಸಿ ಬೆದರಿಸಿ ದರೋಡೆ ಕೃತ್ಯ ನಡೆಸಿದ್ದಾರೆ. ಬಳಿಕ ಮನೆಯ ಸಿಯಾಜ್ ಕಾರಿನ ಕೀ ಪಡೆದು ಆ ಕಾರಿನಲ್ಲಿ ಉಡುಪಿಯತ್ತ ತೆರಳಿದ್ದಾರೆ. ಹೆಜಮಾಡಿ ಟೋಲ್‌ಗೇಟ್ ಮುನ್ನ ಕಾರು ನಿಲ್ಲಿಸಿ ಅವರ ಕಾರಿನಲ್ಲಿ ಪರಾರಿಯಾಗಿರುವ ಶಂಕೆಯಿದೆ. ಕಾರಿನೊಳಗೆ ಮೊಬೈಲ್ ಒಂದು ಪತ್ತೆಯಾಗಿದ್ದು, ಇದು ಯಾರ ಮೊಬೈಲ್ ಎಂದು ತಿಳಿದು ಬಂದಿಲ್ಲ. ಪೊಲೀಸರ ಮಾಹಿತಿ ಪ್ರಕಾರ ಇದು ದರೋಡೆಕೋರರ ಮೊಬೈಲ್ ಅವಸರದಲ್ಲಿ ಕಾರಿನಲ್ಲೇ ಬಾಕಿಯಾಗಿರುವ ಸಾಧ್ಯತೆ ಇದೆ. ಕಾರಿನ ಬಾಗಿಲು ಇನ್ನೂ ತೆರೆದು ಪರಿಶೀಲನೆ ನಡೆಸಿಲ್ಲ. ಮೂಲ್ಕಿ ಪೊಲೀಸರು ಕಾರನ್ನು ಪತ್ತೆಹಚ್ಚಿ, ವಶಕ್ಕೆ ಪಡೆದುಕೊಂಡಿದ್ದಾರೆ. ಸುಮಾರು 14 ಲಕ್ಷ ರು. ಮೌಲ್ಯದ ಚಿನ್ನಾಭರಣ ಸೊತ್ತುಗಳನ್ನು ಕಳವು ಮಾಡಲಾಗಿದೆ ಎಂದು ಹೇಳಲಾಗಿದೆ.


ಚಡ್ಡಿ ಗ್ಯಾಂಗ್ ಕೃತ್ಯ?:
ಕಳೆದ ಎರಡು ವಾರಗಳಲ್ಲಿ ಇದು ಮೂರನೇ ದರೋಡೆ ಪ್ರಕರಣವಾಗಿದ್ದು, ಇದರ ಹಿಂದೆ ಕುಖ್ಯಾತ ಅಂತಾರಾಜ್ಯದ ಚಡ್ಡಿ ಗ್ಯಾಂಗ್‌ನ ಕೃತ್ಯ ಇರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ. ಕಳ್ಳತನ ಕೃತ್ಯ ಸುಲಭ ಹಾಗೂ ಸಲೀಸಾಗಿ ನಡೆಸಲು ಹುಟ್ಟಿಕೊಂಡ ಚಡ್ಡಿ ಧರಿಸಿಕೊಂಡ ತಂಡವೇ ಚಡ್ಡಿ ಗ್ಯಾಂಗ್. ಈ ತಂಡದಲ್ಲಿ ಉತ್ತರ ಭಾರತ ಹಾಗೂ ಆಂಧ್ರ ಪ್ರದೇಶದ ಮಂದಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ದರೋಡೆಕೋರರು ಚಡ್ಡಿ, ಬನಿಯಾನ್ ಮತ್ತು ಮುಖಕ್ಕೆ ಮಂಕಿ ಕ್ಯಾಪ್ ಹಾಕಿದ್ದರು. ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಿದ್ದರು. ನಾವೇನು ನಿಮಗೆ ತೊಂದರೆ ಮಾಡುವುದಿಲ್ಲ. ಕಪಾಟು ಕೀ ಕೊಡಿ ಎಂದು ಮನೆಯವರಿಗೆ ಬೆದರಿಕೆ ಹಾಕಿದ್ದಾರೆ. ಕೀ ಕೊಟ್ಟ ಬಳಿಕ ಅದರಿಂದ ಕಪಾಟು ತೆರೆಯಲಾಗದೆ ಸ್ಕ್ರೂಡ್ರೈವರ್ ಬಳಸಿ ಕಪಾಟು ಒಡೆದಿದ್ದಾರೆ.


ದರೋಡೆಕೋರರು ತೆರಳಿದ ಬಳಿಕ ಮನೆಯವರು ಪಕ್ಕದ ಮನೆಗೆ ಫೋನ್ ಮಾಡಿ ತಿಳಿಸಿದ್ದಾರೆ. ಪಕ್ಕದ ಮನೆಯವರು 112 ನಂಬರಿಗೆ ಕರೆ ಮಾಡಿದ್ದು, ಉರ್ವ ಪೊಲೀಸರು ಸ್ಥಳಕ್ಕೆ ಬಂದು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಕನಾಡಿಯಲ್ಲೂ ಕಳವು ಕೃತ್ಯ:

ಇನ್ನೊಂದೆಡೆ ನಗರದ ಪಂಪ್‌ವೆಲ್ ಬಳಿಯ ಕಪಿತಾನಿಯಾದಲ್ಲಿ ಹಮ್ಮಬ್ಬ ಎಂಬವರಿಗೆ ಸೇರಿದ ಅಂಗಡಿಯೊಂದಕ್ಕೆ ನುಗ್ಗಿದ ಇಬ್ಬರು ಕಳ್ಳರು ನಗದು ಕಳವು ಮಾಡಿದ ಘಟನೆ ಮಂಗಳವಾರ ಗಮನಕ್ಕೆ ಬಂದಿದೆ. ಇಬ್ಬರು ಕಳ್ಳರ ಕೃತ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಂಕನಾಡಿ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net