ಮಂಗಳೂರು: ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಎಲ್ಲಾ ರಸ್ತೆಗಳಲ್ಲಿ ವಿವಿಧ ವಾಹನಗಳಿಗೆ ಅವುಗಳ ವೇಗದ ಮಿತಿಯ ಸೂಚನಾ ಫಲಕ ಅಳವಡಿಸಲು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ನಡೆದ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಹನಗಳ ವೇಗದ ಮಿತಿ ಮೀರುವ ವಾಹನ ಚಾಲಕರ ವಿರುದ್ಧ ಮಂಗಳೂರು ಸಂಚಾರ ಪೊಲೀಸರು ‘ಮೊಬೈಲ್ ಸ್ಪೀಡ್ ರಾಡಾರ್ ಗನ್’ ಮುಖಾಂತರ ಪ್ರಕರಣ ದಾಖಲಿಸುವ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವಿವಿಧ ವಾಹನಗಳಿಗೆ ನಿಗದಿಪಡಿಸಿದರುವ ವೇಗ ಮಿತಿಯ ಸೂಚನಾ ಫಲಕಗಳನ್ನು ರಸ್ತೆಗಳ ಬದಿಯಲ್ಲಿ ಸಾಕಷ್ಟು ಕಡೆಗಳಲ್ಲಿ ಅಳವಡಿಸುವಂತೆ ಸೂಚಿಸಿದರು.
ಅತೀ ವೇಗ ಹಾಗೂ ಅಜಾಗರೂಕತೆಯ ವಾಹನ ಚಾಲನೆಯಿಂದಾಗಿ ಉಂಟಾಗುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಕಮಿಷನರೇಟ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ನಗರ ಸಭೆ, ಪುರಸಭೆ/ ಪಾಲಿಕೆ ವ್ಯಾಪ್ತಿಯ ಹಾಗೂ ಇತರ ರಸ್ತೆಗಳಲ್ಲಿ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಪ ಪೊಲೀಸ್ ಆಯುಕ್ತರಾದ ಬಿ.ಪಿ. ದಿನೇಶ್ ಕುಮಾರ್, ಎನ್‌ಎಚ್‌ಎಐ ಇಲಾಖೆಯಿಂದ ಯೋಜನಾ ನಿರ್ದೇಶಕರಾದ ಅಬ್ದುಲ್ಲ ಜಾವೇದ್ ಅಝ್ಮಿ, ಇಂಜಿನಿಯರ್ ಅನಿರುದ್ಧ ಕಾಮತ್, ಪಿಡಬ್ಲೂೃ ಇಲಾಖೆಯಿಂದ ಎಇ ಲಾಯಿಡ್ ಡಿಸಿಲ್ವಾ, ಮಂಗಳೂರು ಸ್ಮಾರ್ಟ್‌ಸಿಟಿ ವತಿಯಿಂದ ಎಇಇ ಮಂಜು ಕೀರ್ತಿ ಎಸ್, ಮಹಾನಗರಪಾಲಿಕೆಯಿಂದ ಇಇ ಜ್ಞಾನೇಶ್, ಎಇಇ ಎಂ.ಎನ್. ಶಿವಲಿಂಗಪ್ಪ ಮತ್ತು ಎಇಇ ಮಿಥುನ್ ಉಪಸ್ಥಿತರಿದ್ದರು. ಅಧಿಸೂಚನೆಯಲ್ಲಿ ತಿಳಿಸಿರುವ ರಸ್ತೆಗಳನ್ನು ಉಪಯೋಗಿಸುವ ಎಲ್ಲಾ ವಾಹನ ಚಾಲಕರು ವೇಗದ ಮಿತಿಯ ಸೂಚನಾ ಫಲಕಗಳಲ್ಲಿ ಕಾಣಿಸಿದ ಮಿತಿಗಿಂತ ಕಡಿಮೆ ವೇಗದಲ್ಲಿ ವಾಹನವನ್ನು ಚಲಾಯಿಸಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಮಂಗಳೂರು ನಗರ ಟ್ರಾಫಿಕ್ ಪೊಲೀಸರ ಅಪಘಾತ ತಡೆ ಅಭಿಯಾನಕ್ಕೆ ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.