ಮನಪಾ ಸಂಚಾರ ಸುವ್ಯವಸ್ಥೆ ಸಭೆಯಲ್ಲಿ ಸಮಸ್ಯೆಗಳ ಮಹಾಪೂರ

mng-aug28-mcc traffic meeting
Published on

ಮಂಗಳೂರು: ರಸ್ತೆ, ಫುಟ್‌ಪಾತ್‌ಗಳಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್, ಒಳ ರಸ್ತೆಗಳಲ್ಲೂ ಪಾರ್ಕಿಂಗ್, ಶಾಲಾ- ಕಾಲೇಜು ಹಾಗೂ ಜಂಕ್ಷನ್‌ಗಳಲ್ಲಿ ಪಾರ್ಕಿಂಗ್, ಝೀಬ್ರಾ ಕ್ರಾಸಿಂಗ್ ಅವ್ಯವಸ್ಥೆ, ಅವೈಜ್ಞಾನಿಕ ಡಿವೈಡರ್ …..


ಇದು ಮೇಯರ್ ಸುಧೀರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ಮನಪಾ ಸಭಾಂಗಣದಲ್ಲಿ ನಡೆದ ಸಂಚಾರ ಸುವ್ಯವಸ್ಥೆ ಬಗ್ಗೆ ನಡೆದ ಸಭೆಯಲ್ಲಿ ಮನಪಾ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಸೇರಿದಂತೆ ಸದಸ್ಯರನೇಕರಿಂದ ಪಾಲಿಕೆ ವ್ಯಾಪ್ತಿಯ ಸಂಚಾರ ಸಮಸ್ಯೆಗಳ ಮಹಾಪೂರವೇ ಹರಿದು ಬಂತು.


ನಗರದಲ್ಲಿ ಸೂಕ್ತ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಬೇಕು. ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇರುವ ಕಾರಣ ಈ ರೀತಿಯಾಗಿ ಸಾರ್ವಜನಿಕರು ಅಲ್ಲಲ್ಲಿ ನಿಲ್ಲಿಸುವ ವಾಹನಗಳಿಗೆ ದಂಡ ಹಾಕುವುದು, ವಾಹನಗಳನ್ನು ವಶಪಡಿಸುವ ಕಾರ್ಯ ನಡೆಸಿದಾಗ ಸಾರ್ವಜನಿಕರಿಂದ ಪಾರ್ಕಿಂಗ್ ಜಾಗ ಎಲ್ಲಿ ಎಂಬ ಪ್ರಶ್ನೆ ಬರುತ್ತಿದೆ ಎಂದು ಡಿಸಿಪಿ ದಿನೇಶ್ ಕುಮಾರ್ ತಿಳಿಸಿದರು.


ಸ್ಮಾರ್ಟ್ ಸಿಟಿ ಮೂಲಕ ಅಭಿವೃದ್ಧಿಯಾಗಿರುವ ರಸ್ತೆಗಳ ಪಟ್ಟಿ ಮಾಡಿಕೊಂಡು ಕಂದಾಯ ಮತ್ತು ಪೊಲೀಸ್ ಇಲಾಖೆಗೆ ಪಾರ್ಕಿಂಗ್‌ಗೆ ಸೂಕ್ತ ಜಾಗದ ವರದಿ ನೀಡಿ, ಬಳಿಕ ಮೂರು ಇಲಾಖೆಗಳು ಕೂಲಂಕುಶವಾಗಿ ಪರಿಶೀಲನೆ ನಡೆಸಿ ಜಾಗ ಗುರುತಿಸಿ ಟೆಂಡರ್ ಕರೆಯುವಂತೆ ಮೇಯರ್ ಸುಧೀರ್ ಶೆಟ್ಟಿ ನಿರ್ದೇಶನ ನೀಡಿದರು.


ನಗರದಲ್ಲಿ ಎಲ್ಲೆಂದರಲ್ಲಿ ಮನಸ್ಸಿಗೆ ಬಂದ ಹಾಗೆ ರಸ್ತೆಗಳನ್ನು ಅಗೆಯಲಾಗುತ್ತಿದೆ. ಹಲವು ರಸ್ತೆಗಳು ಅಗಲಗೊಂಡು ಅಭಿವೃದ್ಧಿಯಾಗಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ರಸ್ತೆ ವಿಭಾಜಕಗಳು ಇರುವಲ್ಲಿ ಪಾದಾಚಾರಿಗಳು ರಸ್ತೆ ದಾಟಲು ಯೋಗ್ಯವಾಗುವಂತೆ ಝೀಬ್ರಾ ಕ್ರಾಸಿಂಗ್ ಅಳವಡಿಸುವಂತೆ ಹಲವು ಪತ್ರಗಳನ್ನು ಬರೆಯಲಾಗಿದ್ದರೂ ಪೂರಕ ಸ್ಪಂದನೆ ದೊರಕಿಲ್ಲ ಎಂದು ಡಿಸಿಪಿ ದಿನೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.


ಬಸ್ ತಂಗುದಾಣ ಸ್ಥಳಾಂತರ ಅವಶ್ಯ
ಬೆಂದೂರ್‌ವೆಲ್ ಜಂಕ್ಷನ್ ಹಾಗೂ ಬಂಟ್ಸ್‌ಹಾಸ್ಟೆಲ್ ಮೊದಲಾದ ಪ್ರಮುಖ ಜಂಕ್ಷನ್‌ಗಳಲ್ಲಿ ಬಸ್ಸು ತಂಗುದಾಣಗಳನ್ನು ಸ್ಥಳಾಂತರಿಸುವಂತೆ ಸಾಕಷ್ಟು ಬಾರಿ ಸಲಹೆ ನೀಡಲಾಗಿದೆ. ಈ ಸಮಸ್ಯೆಯನ್ನು ಬಗೆಹರಿಸದೆ ನಗರದಲ್ಲಿ ಸಂಚಾರ ಸುವ್ಯವಸ್ಥೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅಸಾಧ್ಯ ಎಂದು ಡಿಸಿಪಿ ದಿನೇಶ್ ಕುಮಾರ್ ಹೇಳಿದರು.


ಶಾಲಾ ಕಾಲೇಜುಗಳಲ್ಲಿ, ಅಪಾರ್ಟ್‌ಮೆಂಟ್‌ಗಳ ಎದುರು ವಾಹನ ನಿಲುಗಡೆಗೆ ಸಂಬಂಧಿಸಿ ಟ್ರಾಫಿಕ್ ಪೊಲೀಸರಿಂದ ಯಾವ ರೀತಿಯ ಕ್ರಮಗಳಾಗಿವೆ. ಸಂಚಾರ ವ್ಯವಸ್ಥೆಗೆ ತೊಂದರೆಯಾಗುವಂತೆ ವಾಹನಗಳ ನಿಲುಗಡೆ, ಪಾರ್ಕಿಂಗ್ ಮಾಡುವವರಿಗೆ ದಂಡ ಹಾಕಲು ಯಾಕಾಗುತ್ತಿಲ್ಲ ಎಂದು ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಪ್ರಶ್ನಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್ ಕುಮಾರ್, ನಗರದ ಪ್ರಮುಖ ಶಾಲಾ ಕಾಲೇಜುಗಳಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸಂಚಾರ ಸುವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಮಾತ್ರವಲ್ಲದೆ, ಮೂರು ಬಾರಿ ಶಾಲಾ ಕಾಲೇಜುಗಳ ಮುಖ್ಯಸ್ಥರ ಸಭೆ ಕರೆದು ಶಾಲಾ ವಾಹನಗಳ ನಿಲುಗಡೆಯ ಬಗ್ಗೆಯೂ ಮನವರಿಕೆ ಮಾಡಲಾಗಿದೆ. ಈ ಬಗ್ಗೆ ಮನಪಾದಿಂದ ಸಂಬಂಧಪಟ್ಟ ಅಪಾರ್ಟ್‌ಮೆಂಟ್, ಪ್ರಮುಖ ಶಾಲಾ ಕಾಲೇಜುಗಳಿಗೆ ನೋಟೀಸು ನೀಡುವ ಕಾರ್ಯವೂ ಆಗಬೇಕಾಗಿದೆ ಎಂದರು.


ಟ್ರಾಫಿಕ್ ಸಮಸ್ಯೆ ಅಧ್ಯಯನ ವರದಿ ಅಗತ್ಯ
ಪಾಲಿಕೆ ವ್ಯಾಪ್ತಿಯ ಎಲ್ಲಾ 60 ವಾರ್ಡ್‌ಗಳ ಸಮಸ್ಯೆಯನ್ನು ಗುರುತಿಸುವ ನಿಟ್ಟಿನಲ್ಲಿ ಎನ್‌ಐಟಿಕೆಯ ಟ್ರಾಫಿಕ್ ಮ್ಯಾನೇಜ್‌ಮೆಂಟ್ ವಿಭಾಗದ ಮೂಲಕ ಅಧ್ಯಯನ ನಡೆಸಿ ವರದಿ ಆಧಾರದಲ್ಲಿ ಸಮಗ್ರ ಯೋಜನೆ ರೂಪಿಸುವ ಕೆಲಸ ಆಗಬೇಕು ಎಂದು ಹಿರಿಯ ಸದಸ್ಯ ಶಶಿಧರ ಹೆಗ್ಡೆ ಸಲಹೆ ನೀಡಿದರು.


ಅನಗತ್ಯ ತೆರೆದ ರಸ್ತೆ ವಿಭಾಜಕ ಮುಚ್ಚಲು ಕ್ರಮ
ಕೆಪಿಟಿಯಿಂದ ಮಂಗಳೂರು ಏರ್‌ಪೋರ್ಟ್‌ಗೆ ಹೋಗುವ ರಸ್ತೆಯಲ್ಲಿ ಅಲ್ಲಲ್ಲಿ ರಸ್ತೆ ವಿಭಾಜಕಗಳನ್ನು ತೆರೆಯಲಾಗಿದೆ. ಇದರಿಂದಾಗಿ ವಾಹನ ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ರೀತಿ ಅನಗತ್ಯವಾಗಿ ತೆರೆದಿರುವ ರಸ್ತೆ ವಿಭಾಜಕಗಳಗಳನ್ನು ಬಂದ್ ಮಾಡಬೇಕು ಎಂದು ಸದಸ್ಯೆ ಸಂಗೀತ ಆರ್. ನಾಯಕ್ ಒತ್ತಾಯಿಸಿದರು.


ಈಗಾಗಲೇ ನಗರದ ಸಾಕಷ್ಟು ಕಡೆಗಳಳಲ್ಲಿ ಅಗತ್ಯವಿಲ್ಲದೆಡೆ ತೆರೆದಿರುವ ರಸ್ತೆ ವಿಭಾಜಕಗಳ ಬಗ್ಗೆ ವರದಿ ನೀಡುವಂತೆ ಸಂಚಾರಿ ಪೊಲೀಸರಿಗೆ ತಿಳಿಸಲಾಗಿದ್ದು, ಮನಪಾ ಸದಸ್ಯರು ಇಂತಹ ರಸ್ತೆ ವಿಭಾಜಗಳನ್ನು ಮುಚ್ಚಲು ಮಾಹಿತಿ ನೀಡಿದರೆ ಕ್ರಮ ವಹಿಸಲಾಗುವುದು ಎಂದು ಡಿಸಿಪಿ ತಿಳಿಸಿದರು. ಹಾರ್ನ್ ನಿಷೇಧಿತ ವಲಯಗಳಲ್ಲಿ ಸೂಚನಾ ಫಲಕಗಳ ಅಳವಡಿಕೆ, 20 ಕಡೆ ನೋ ಪಾರ್ಕಿಂಗ್ ಪ್ರದೇಶಗಳ ಬಗ್ಗೆ ಪಟ್ಟಿ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ ಎಂದೂ ಡಿಸಿಪಿ ಅಸಮಾಧಾನ ವ್ಯಕ್ತಪಡಿಸಿದರು.


ಮನಪಾ ಸದಸ್ಯರಾದ ಜಗದೀಶ್ ಶೆಟ್ಟಿ, ಕಿರಣ್ ಕೋಡಿಕಲ್, ವಿನಯರಾಜ್, ಅನಿಲ್ ಕುಮಾರ್, ಸಂಶುದ್ದೀನ್,ಜಯಾನಂದ ಅಂಚನ್, ಭಾಸ್ಕರ್ ಹಾಗೂ ಇನ್ನಿತರರು ತಮ್ಮ ವಾರ್ಡ್‌ಗಳಲ್ಲಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಗಮನ ಸೆಳೆದರು.
ಉಪ ಮೇಯರ್ ಸುನೀತಾ, ಉಪ ಆಯುಕ್ತ (ಅಭಿವೃದ್ಧಿ) ಚಂದ್ರಶೇಖರಯ್ಯ, ಎಸಿಪಿ ನಜ್ಮಾ ಫಾರೂಕಿ ಮೊದಲಾದರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net