

ಮಂಗಳೂರು: ಸೈನಿಕರು ದೇಶಕ್ಕಾಗಿ ಸೇವೆ ಮಾಡುತ್ತಾರೆ. ಅವರಿಗೆ ಗೌರವ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮಕ್ಕಳಲ್ಲಿ ಸೈನಿಕರ ಹಾಗೂ ದೇಶ ಪ್ರೇಮ ಬೆಳೆಸಬೇಕು ಎಂದು ನಿವೃತ್ತ ಸೇನಾನಿ ಬ್ರಿಗೇಡಿಯರ್ ಐ.ಎನ್. ರೈ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮನಪಾ ಮಂಗಳಾ ಸಭಾಂಗಣದಲ್ಲಿ ಶುಕ್ರವಾರ ಕಾರ್ಗಿಲ್ ವಿಜಯ ದಿವಸ್ 25 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೈನ್ಯದಲ್ಲಿ ನಾಲ್ಕೈದು ಬಾರಿ ಸಾವಿನ ಅಂಚಿಗೆ ತೆರಳಿ ಮತ್ತೆ ಬದುಕಿ ಬಂದಿದ್ದೇನೆ. ಮೂರು ತಿಂಗಳ ಕಾಲ ಐಸಿಯುನಲ್ಲಿದ್ದೆ. ದೇಶಕ್ಕಾಗಿ ಸೇವೆ ಸಲ್ಲಿಸಿದ ತೃಪ್ತಿ ಇದೆ. ಸೈನಿಕರು ಕಚೇರಿ ಕೆಲಸ ಅಥವಾ ಇತರ ಕಾರ್ಯಗಳಿಗೆ ಬಂದಾಗ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಿ ಎಂದರು.
1999ರ ಮೇ 3ರಿಂದ ಜುಲೈ 26ರವರೆಗೆ ಕಾರ್ಗಿಲ್ ಯುದ್ಧ ನಡೆದಿತ್ತು. ಅಪರೇಶನ್ ವಿಜಯ್ ಭಾರತೀಯ ಸೈನಿಕರ ತ್ಯಾಗ, ಧೀರತ್ವದಿಂದ ಯಶಸ್ಸು ಪಡೆಯಿತು. ನಾವು ವಿದೇಶಗಳಿಗೆ ಪ್ರವಾಸ ತೆರಳುವ ಬದಲಿಗೆ ಜಮ್ಮು, ಕಾಶ್ಮೀರ, ಲೇಹ್, ಕಾರ್ಗಿಲ್ ಪ್ರದೇಶಗಳಿಗೆ ತೆರಳಿದರೆ ದೇಶದ
ಸೈನಿಕರ ಜೀವನ, ತ್ಯಾಗವನ್ನು ತಿಳಿಯಬಹುದು ಎಂದು ಐ.ಎನ್. ರೈ ಹೇಳಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿದ ದೇಶ ನಮ್ಮದು. ಆದರೆ, ಭಾರತಕ್ಕೆ ಸದಾ ಪರಕೀಯರ ದಾಳಿ ನಡೆಯುತ್ತಲೇ ಬಂದಿದೆ. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಆಕ್ರಮಣಕಾರರನ್ನು ನಮ್ಮ ದೇಶದ ವೀರ ಸೈನಿಕರು ದಿಟ್ಟತನದಿಂದ
ಎದುರಿಸಿ ಆಪರೇಶನ್ ವಿಜಯ್‌ಗೆ ಯಶಸ್ಸು ದೊರಕಿಸಿದ್ದಾರೆ. ಅಂದಿನ ರಕ್ಷಣಾ ಸಚಿವ ಮಂಗಳೂರು ಮೂಲದ ಜಾರ್ಜ್ ಫನಾರ್ಂಡಿಸ್ ಅವರು ಈ ಸಂದರ್ಭ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು ಎಂದರು.
ದೇಶ ಸೇವೆ ಸಲ್ಲಿಸುತ್ತಿರುವ ಯೋಧರು ಸೇವಾ ಅವಧಿಯಲ್ಲಿ ವೀರ ಮರಣ ಹೊಂದಿದಲ್ಲಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ನಮ್ಮ ಯೋಧ ಎಂಬ ವಿಶೇಷ ಕಾರ್ಯಕ್ರಮವನ್ನು ಪಾಲಿಕೆ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅದರಂತೆ ದೇಶ ರಕ್ಷಣೆಗಾಗಿ ಸೇವಾವಧಿಯಲ್ಲಿ ವೀರ ಮರಣ ಹೊಂದಿದ ಪಾಲಿಕೆ ವ್ಯಾಪ್ತಿಯ ಇಬ್ಬರು ಯೋಧರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಮೊತ್ತದ ಚೆಕ್ ನೀಡಲಾಗುತ್ತಿದೆ. ವೀರ ಮರಣ ಹೊಂದಿದ ಮನಪಾ ವ್ಯಾಪ್ತಿಯ ಯೋಧರಾದ ಕ್ಯಾ.ಎಂ.ವಿ. ಪ್ರಾಂಜಲ್ ಅವರ ಹೆಸರಿನಲ್ಲಿ ವೃತ್ತ ನಿರ್ಮಾಣ, ರೊನಾಲ್ಡ್ ಕೆವಿನ್ ಸೆರಾವೊ ಅವರ ಹೆಸರಿನ ರಸ್ತೆ ನಿರ್ಮಾಣಕ್ಕೂ ಅನುದಾನ ನೀಡಲಾಗುತ್ತಿದೆ ಎಂದರು.
ವೀರ ಮರಣ ಹೊಂದಿದ ಅಳಪೆ ಉತ್ತರ ಉಮೀಕಾನದ ಬಿಎಸ್‌ಎಫ್ ಹವಾಲ್ದಾರ್ ಹರೀಶ್ ಕುಮಾರ್ ಅವರ ಪತ್ನಿ ಗೀತಾಕುಮಾರಿ ಹಾಗೂ ಶಕ್ತಿನಗರ ಮುಗ್ರೋಡಿಯ ಪ್ಯಾರಾ ಮಿಲಿಟರಿ ಹೆಡ್ ಕಾನ್‌ಸ್ಟೇಬಲ್ ಮುರಳೀಧರ ಬಿ.ಎಸ್. ಅವರ ಪತ್ನಿ ಉಷಾಕಿರಣ್ ಅವರಿಗೆ ತಲಾ 5 ಲಕ್ಷ ರೂ. ಮೊತ್ತದ ಚೆಕ್ ವಿತರಿಸಲಾಯಿತು.
ನಿವೃತ್ತ ಯೋಧರನ್ನು ಈ ವೇಳೆ ಸನ್ಮಾನಿಸಲಾಯಿತು. ಉಪಮೇಯರ್ ಸುನೀತಾ, ಮನಪಾ ಸಚೇತಕ ಪ್ರೇಮಾನಂದ ಶೆಟ್ಟಿ, ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ನಿವೃತ್ತ ಯೋಧ, ಮನಪಾ ಆಯುಕ್ತ ಆನಂದ ಸಿ.ಎಲ್. ಉಪಸ್ಥಿತರಿದ್ದರು.
ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ ಸ್ವಾಗತಿಸಿದರು. ಕಾರ್ಪೋರೇಟರ್ ಕಿರಣ್‌ಕುಮಾರ್ ಕೋಡಿಕಲ್ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.