

ಮಂಗಳೂರು: ಸೆಂಟ್ರಲ್ ನಿಲ್ದಾಣದ ಬಹು ನಿರೀಕ್ಷೆಯ ಫ್ಲಾಟ್‌ಫಾರ್ಮ್ ನಾಲ್ಕು ಮತ್ತು ಐದು ಕಾಮಗಾರಿ ಪೂರ್ಣಗೊಂಡಿದ್ದು, ಶನಿವಾರದಿಂದ ಬಳಕೆಗೆ ತೆರೆದುಕೊಂಡಿದೆ. ಸದ್ಯ ಈ ಪ್ಲಾಟ್‌ಫಾರ್ಮ್‌ಗಳನ್ನು ರೈಲು ಪಾರ್ಕಿಂಗ್‌ಗೆ ಬಳಕೆ ಮಾಡಲಾಗಿದೆ. ಅಧಿಕೃತ ಉದ್ಘಾಟನೆ ಇನ್ನಷ್ಟೇ ನಡೆಯಬೇಕಾಗಿದೆ.
ಪ್ರಸ್ತುತ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಒಂದನೇ ಫ್ಲಾಟ್‌ಫಾರ್ಮ್‌ನಿಂದ ಎರಡು ಮತ್ತು ಮೂರನೇ ಫ್ಲಾಟ್‌ಫಾರ್ಮ್‌ಗಳಿಗೆ ಪ್ರಯಾಣಿಕರ ಮೇಲ್ಸೇತುವೆ (ಎಫ್‌ಓಬಿ) ಇರುತ್ತದೆ. ಆದರೆ ಉದ್ಘಾಟನೆಗೊಳ್ಳಲು ಸಿದ್ದವಾಗಿರುವ ಹೊಸ ಎರಡು ಫ್ಲಾಟ್‌ಫಾರ್ಮ್‌ಗಳಿಗೆ ಪ್ರಥಮ ಹಂತದಲ್ಲಿ ಎಫ್‌ಓಬಿ ಇಲ್ಲದೆ ಇರುವುದು ಪ್ರಯಾಣಿಕರಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಎಫ್‌ಒಬಿ ನಿರ್ಮಾಣಗೊಂಡ ಬಳಿಕಷ್ಟೇ ಅಧಿಕೃತವಾಗಿ ಉದ್ಘಾಟನೆಗೊಂಡು ಪ್ರಯಾಣಿಕರ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ.
ಮಂಗಳೂರು ನಿರೀಕ್ಷೆ ಏನು ?
ಹೊಸ 4 ಮತ್ತು 5 ನೇ ಫ್ಲಾಟ್‌ಫಾರ್ಮ್‌ಗಳು ಉದ್ಘಾಟನೆ ಬಳಿಕ ಮುಂಬೈ ಸಿಎಸ್‌ಟಿ- ಮಂಗಳೂರು ಜಂಕ್ಷನ್, ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ- ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್, ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ ಹಗಲು ರೈಲು ಹಾಗೂ ಮಂಗಳೂರು ಜಂಕ್ಷನ್- ವಿಜಯಪುರ ಎಕ್ಸ್‌ಪ್ರೆಸ್ ರೈಲುಗಳನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು ಎಂದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಂಘ ಈಗಾಗಲೇ ಇಲಾಖೆ ಮಟ್ಟದಲ್ಲಿ ಪ್ರಯತ್ನಿಸುತ್ತಿದೆ. ಇಲ್ಲಿಯ ತನಕ ಈ ಬೇಡಿಕೆ ಈಡೇರಿಸಲು ಮಂಗಳೂರು ಸೆಂಟ್ರಲ್‌ನಲ್ಲಿ ಸ್ಥಳಾವಕಾಶದ ಕೊರತೆ ಇದೆ ಎನ್ನುವ ಕಾರಣವನ್ನು ದಕ್ಷಿಣ ರೈಲ್ವೆ ನೀಡುತ್ತಾ ಬಂದಿದೆ.
ಕೇರಳೀಯರು ಸಜ್ಜು
ಕಣ್ಣುರು- ಕೊಯಮತ್ತೂರು ಎಕ್ಸ್‌ಪ್ರೆಸ್, ಕಣ್ಣೂರು- ಎರ್ನಾಕುಳಂ ಎಕ್ಸ್‌ಪ್ರೆಸ್, ಕಲ್ಲಿಕೋಟೆ- ಕೊಯಮತ್ತೂರು ಎಕ್ಸ್‌ಪ್ರೆಸ್ ರೈಲುಗಳನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕೇರಳದ ಪ್ರಯಾಣಿಕರ ಸಂಘಟನೆಗಳು ಪ್ರಯತ್ನಿಸುತ್ತಿವೆ. ಪಾಲಕ್ಕಾಡ್ ರೈಲ್ವೆ ವಿಭಾಗಿಯ ಸಲಹಾ ಸಮಿತಿ ಸಭೆಯಲ್ಲಿ ಕೂಡ ಉಭಯ ರಾಜ್ಯಗಳ ಬೇಡಿಕೆ ಕುರಿತು ಚರ್ಚೆ ನಡೆದಿದೆ. ಯಾರು ಎಷ್ಟು ಪ್ರಯೋಜನ ಪಡೆಯುತ್ತಾರೆ ಎಂದು ಕಾದುನೋಡಬೇಕು.
ಮಂಗಳೂರಿನಿಂದ ವಂದೇ ಭಾರತ್
ಇಂಟರ್ ಸಿಟಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿನಿಂದ ಆರಂಭಿಸಲು ಸಿದ್ಧತೆ ನಡೆಯುತ್ತಿದ್ದು, ಮಂಗಳೂರು ಸೆಂಟ್ರಲ್‌ನಲ್ಲಿ ಪಿಟ್‌ಲೈನ್ ಕಾಮಗಾರಿ ಉನ್ನತೀಕರಿಸುವ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ಕೂಡಲೇ ವಂದೇ ಭಾರತ್ ಮಂಗಳೂರು ಸೆಂಟ್ರಲ್ ಮತ್ತು ತಿರುವನಂತಪುರ ಅಥವಾ ಎರ್ನಾಕುಳಂ ನಡುವೆ ಆರಂಭಗೊಳ್ಳುವ ನಿರೀಕ್ಷೆ ಇದೆ.