ದರೋಡೆಗೆ ಸಂಚು ರೂಪಿಸುತ್ತಿದ್ದ ಮೂವರ ಸೆರೆ ಸಿಸಿಬಿ ಪೊಲೀಸರ ಕಾರ್ಯಾಚರಣೆ

mng--9 June Mohammad nawshad
Published on


ಮಂಗಳೂರು: ನಗರದ ಉಳ್ಳಾಲ ಮುಕ್ಕಚ್ಚೇರಿ ಪರಿಸರದಲ್ಲಿ ಶ್ರೀಮಂತ ವ್ಯಕ್ತಿಗಳನ್ನು, ವ್ಯಾಪಾರಸ್ಥರನ್ನು ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಮೂವರು ಕುಖ್ಯಾತ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಉಳ್ಳಾಲ ಮುಕ್ಕಚೇರಿ ಕಿಲಿರಿಯ ನಗರದ ಮುಹಮ್ಮದ್ ಸಮೀರ್ ಆಲಿ ಯಾನೆ ಕಡಪರ ಸಮೀರ್ (33), ಬೋಳಿಯಾರ್ ಜುಮ್ಮಾ ಮಸೀದಿಯ ಬಳಿಯ ಕಾಫಿಕಾಢ್ ಹೌಸ್ ನಿವಾಸಿ ಮೊಹಮ್ಮದ್ ಮನ್ಸೂರ್ ಯಾನೆ ಬೋಳಿಯಾರು ಮನ್ಸೂರು (30), ಕೊಣಾಜೆ ಗ್ರಾಮ ಚಾವಡಿ ಬದ್ರಿಯಾ ನಗರದ ಮೊಹಮ್ಮದ್ ನೌಷಾದ್ (30) ಬಂಧಿತರು.


ಈ ಹಿಂದೆ ಕೊಲೆ, ಕೊಲೆಯತ್ನ, ದರೋಡೆ, ಮಾದಕ ವಸ್ತು ಮಾರಾಟ ಹಾಗೂ ಇತರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ತಂಡವೊಂದು ಮಂಗಳೂರು ನಗರದ ಉಳ್ಳಾಲದ ಮುಕ್ಕಚ್ಚೇರಿ ಪರಿಸರದಲ್ಲಿ ತಲವಾರುಗಳೊಂದಿಗೆ ಶ್ರೀಮಂತ ವ್ಯಕ್ತಿಗಳನ್ನು, ವ್ಯಾಪಾರಸ್ಥರನ್ನು ದರೋಡೆ ನಡೆಸಲು ಸಂಚು ರೂಪಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.


ಆರೋಪಿಗಳಿಂದ ತಲವಾರು-1, ಚೂರಿ-1, ಮೊಬೈಲ್ ಫೋನುಗಳು-3 ಹಾಗೂ ಜೀಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 25,90,000 ರೂ. ಆಗಬಹುದು. ಆರೋಪಿಗಳ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿ ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಹಳೇ ಪ್ರಕರಣಗಳ ಆರೋಪಿಗಳು
ಆರೋಪಿಗಳ ಪೈಕಿ ಮುಹಮ್ಮದ್ ಸಮೀರ್ ಎಂಬಾತನು ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೊಲೆ ಯತ್ನ, ಜೀವ ಬೆದರಿಕೆ ಪ್ರಕರಣ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಇಲ್ಯಾಸ್ ಕೊಲೆ ಪ್ರಕರಣ, ಫಳ್ನೀರ್ ನ ಶಾಪ್ ವೊಂದರಲ್ಲಿ ನಡೆದ ಶೂಟೌಟ್ ಪ್ರಕರಣ, ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಜೀವ ಬೆದರಿಕೆ ಪ್ರಕರಣ ಹೀಗೆ ಒಟ್ಟು 7 ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಇನ್ನೋರ್ವ ಆರೋಪಿ ಮೊಹಮ್ಮದ್ ಮನ್ಸೂರ್ ವಿರುದ್ಧ ಈ ಹಿಂದೆ ಕೊಣಾಜೆ ಠಾಣೆಯಲ್ಲಿ ದರೋಡೆ, ಹಲ್ಲೆ ಪ್ರಕರಣ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಫಳ್ನೀರ್ ಶೂಟೌಟ್ ಪ್ರಕರಣ, ಹಾಗೂ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ. ಆರೋಫಿ ಮೊಹಮ್ಮದ್ ನೌಷದ್ ಎಂಬಾತನು ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ.


ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಎಚ್.ಎಂ, ಪಿಎಸ್‌ಐಯವರಾದ ಸುದೀಪ್ ಎಂ.ವಿ., ಶರಣಪ್ಪ ಎಸ್. ಭಂಡಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net