

ಮಂಗಳೂರು: ಸುಮಾರು 30 ವರ್ಷಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಂಆರ್ ಪಿಎಲ್ ಬಳಿಯಲ್ಲಿ ನಡೆದ ಕೊಲೆ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ ಬಂಧನವಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸತತ ಕಾರ್ಯಾಚರಣೆ ಬಳಿಕ ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇರಳದ ಪುತ್ತೂರು ಕೊಟ್ಟಾರಕ್ಕರ ಕೊಲ್ಲಂ ನಿವಾಸಿ ಜೋಸ್ ಕುಟ್ಟಿ ಪಾಪಚ್ಚನ್ (55) ಬಂಧಿತ ಆರೋಪಿ. ಕೊಲೆ ಪ್ರಕರಣದಲ್ಲಿ ಈತನೊಂದಿಗಿದ್ದ ಇನ್ನೋರ್ವ ಆರೋಪಿ ಅಚ್ಚನ್ ಕುಂಞಿ 8 ವರ್ಷಗಳ ಹಿಂದೆ ಮೃತಪಟ್ಟಿದ್ಧಾನೆ. ಕೇರಳ ರಾಜ್ಯದ ಎರ್ನಾಕುಳಂ ಜಿಲ್ಲೆಯ ತ್ರಿಪ್ಪುಳಿತ್ತುರಂ ಎಂಬಲ್ಲಿಂದ ಆರೋಪಿಯನ್ನು ಬಂಧಿಸಲಾಗಿದೆ.
* ಯಾರ ಕೊಲೆ? : ಸುರತ್ಕಲ್‌ನ ಭಾಳ ಗ್ರಾಮದಲ್ಲಿ ಎಂಆರ್ ಪಿಎಲ್ ಟೌನ್ ಶಿಪ್ ಸೈಟ್ ಪರಿಸರದಲ್ಲಿ ರಕ್ಷಕ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಇನ್ಸಿಟ್ಯೂಟ್ ಮಾಲೀಕ ಅಬ್ದುಲ್ಲಾ ಅವರು 5 ಮಂದಿ ಸೆಕ್ಯೂರಿಟಿ ಗಾರ್ಡ್ ಗಳನ್ನು ಡೆಲ್ಲಿ ಮೂಲದ ಮೆಸರ್ಸ್ ಸ್ಕೈಲೈನ್ ಇಂಟಿರಿಯರ್ಸ್ ಮತ್ತು ಕನ್ಸ್ ಸ್ಟ್ರಕ್ಷನ್ ಕಂಪೆನಿಯಲ್ಲಿ ನೇಮಿಸಿದ್ದರು. 1995 ಮಾ.12ರಂದು ರಾತ್ರಿ 10.30 ಗಂಟೆ ಸುಮಾರಿಗೆ ಈ ಸೈಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ನವರಾದ ಸುರೇಶ್, ನಾರಾಯಣ ಹಾಗೂ ದೇವಣ್ಣ ಕೆಲಸ ಮಾಡಿಕೊಂಡಿದ್ದರು. ಈ ಸಮಯ ಮೂರು ಮಂದಿ ಅಪರಿಚಿತರು ಎಂ ಆರ್ ಪಿ ಎಲ್ ಟೌನ್ ಶಿಪ್ ಸೈಟ್ ಪರಿಸರಕ್ಕೆ ಬಂದಿದ್ದರು. ಈ ರಾತ್ರಿ ವೇಳೆಯಲ್ಲಿ ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಸೆಕ್ಯೂರಿಟಿ ಗಾರ್ಡ್ ರವರು ವಿಚಾರಿಸಿದಾಗ ಆಗಂತುಕರು ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದರು. ಈ ಪೈಕಿ ಗಂಭೀರ ಗಾಯಗೊಂಡ ನಾರಾಯಣ ಅವರು ಮೃತಪಟ್ಟಿದ್ದು, ಸುರತ್ಕಲ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಇನ್ನೊಂದು ಪ್ರಕರಣದಲ್ಲಿ ಅದೇ ದಿನ ರಾತ್ರಿ ಆರೋಪಿಗಳಾದ ಪೈಕಿ ಅಚ್ಚನ್ ಕುಂಞ ಮತ್ತು ಜೋಸ್ ಕುಟ್ಟಿ ಎಂ ಆರ್ ಪಿ ಎಲ್ ಸೈಟ್ ನಲ್ಲಿರುವ ಕ್ಯಾಂಟೀನ್ ಬಳಿಯಲ್ಲಿ ಮಲಗಿದ್ದ ಕೂಲಿ ಕೆಲಸದವರ ಜೊತೆ ಗಲಾಟೆ ಮಾಡುತ್ತಿದ್ದು, ಈ ಸಮಯ ಗಲಾಟೆ ಮಾಡದಂತೆ ತಡೆಯಲು ಬಂದಿದ್ದ ಆರೋಪಿಗಳ ಭಾವನಾದ ತೋಮಸ್ ಎಂಬವರಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದರು. ನಂತರ ಗಂಭೀರ ಗಾಯಗೊಂಡ ತೋಮಸ್ ರವರು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಅಚ್ಚನ್ ಕುಂಞ ಮತ್ತು ಜೋಸ್ ಕುಟ್ಟಿ ರವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಕೊಲೆ ಕೃತ್ಯ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ನಂತರ ಬಂಧನವಾಗದೇ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗೆ ಪೊಲೀಸರು ಮಾಹಿತಿಯನ್ನು ಸಂಗ್ರಹಿಸಿ ಪತ್ತೆಗೆ ಪ್ರಯತ್ನಿಸಿದ್ದರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಆರೋಪಿಗಳು ಕೃತ್ಯ ನಡೆಸಿದ ನಂತರ ಅವರ ಊರಾದ ಕೇರಳಕ್ಕೆ ಹೋಗಿ ವಿವಿಧ ಕಡೆಗಳಲ್ಲಿ ಹಾಗೂ ಗುಜರಾತ್, ರಾಜಸ್ಥಾನ, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು.
ಜೋಸ್ ಕುಟ್ಟಿ ಎಂಬಾತನ ಬಗ್ಗೆ ಸುಮಾರು 4 ತಿಂಗಳಿಂದ ಮಾಹಿತಿ ಸಂಗ್ರಹಿಸಿದ ಮಂಗಳೂರು ಸಿಸಿಬಿ ಪೊಲೀಸರು ಕೇರಳದಲ್ಲಿ ಬಂಧಿಸಿ, ಕರೆ ತಂದು ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ, ಪೊಲೀಸ್ ಇನ್‌ಸ್ಪೆಕ್ಟರ್ ಶ್ಯಾಮ್ ಸುಂದರ್ ಎಚ್.ಎಂ, ಎಎಸ್‌ಐ ಮೋಹನ್ ಕೆ.ವಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.