ಕ್ಯಾಂಪ್ಕೋ 5.99 ಕೋಟಿ ರೂ. ನಿವ್ವಳ ಲಾಭ ಮಹಾಸಭೆಯಲ್ಲಿ ಅಧ್ಯಕ್ಷ ಕಿಶೋರ್ ಕುಮಾರ್ ಕೋಡ್ಗಿ ಮಾಹಿತಿ

mng--31 Aug campco
Published on

ಮಂಗಳೂರು: ಕ್ಯಾಂಪ್ಕೋ ಕಳೆದ ಸಾಲಿನಲ್ಲಿ 3,336.87 ಕೋಟಿ ರೂ. ಸಾರ್ವಕಾಲಿಕ ದಾಖಲೆಯ ವಹಿವಾಟು ನಡೆಸಿ 5.99 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.


ಮಂಗಳೂರು ಹೊರವಲಯದ ಅಡ್ಯಾರು ಗಾರ್ಡನ್‌ನಲ್ಲಿ ಶನಿವಾರ ನಡೆದ ಕ್ಯಾಂಪ್ಕೋ(ಕೇಂದ್ರ ಅಡಕೆ ಮತ್ತು ಕೋಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿ ನಿಯಮಿತ) ಇದರ 50ನೇ ವಾರ್ಷಿಕ ಮಹಾಸಭೆಯಲ್ಲಿ ಈ ಮಾಹಿತಿ ನೀಡಿದರು.


ವಿದೇಶಿ ಅಡಕೆಯ ಅಕ್ರಮ ಆಮದಿನಿಂದ ದೇಶಿ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಮೇಲೆ ಪ್ರಭಾವ ಬೀರಿದರೂ ಪರಿಣಾಮಕಾರಿ
ಕಾರ್ಯತಂತ್ರಗಳ ಮೂಲಕ ತೆಗೆದುಕೊಂಡ ತೀರ್ಮಾನದಿಂದ ಅಂತಿಮ ತ್ರೈಮಾಸಿಕ ಅವಧಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದವರು ಹೇಳಿದರು.


ಗೋಡಂಬಿ ಖರೀದಿಗೆ ಚಿಂತನೆ:
ಅಡಕೆ, ಕಾಳುಮೆಣಸು, ಕೋಕೋ ಖರೀದಿಸುತ್ತಿರುವ ಕರ್ನಾಟಕ-ಕೇರಳದ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಅವಶ್ಯವಾದರೆ ಗೋಡಂಬಿ ಖರೀದಿಗೆ ಚಿಂತನೆ ನಡೆಸಿದೆ. ಈ ಬಗ್ಗೆ ಅಂತಿಮ ತೀರ್ಮಾನವನ್ನು ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಕೈಗೊಳ್ಳಲಾಗುವುದು ಎಂದರು. ಮುಂದಿನ 25 ವರ್ಷಗಳ ಯೋಜನೆಯನ್ನು ದೃಷ್ಟಿಯಲ್ಲಿರಿಸಿ ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಬಳಿ ನಾಲ್ಕೂವರೆ ಎಕರೆ ಜಾಗವನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದರು.


ತೆಂಗು ಖರೀದಿಗೆ ಒತ್ತಾಯ: ಪೂರ್ಣ ಪ್ರಮಾಣದಲ್ಲಿ ತೆಂಗು ಖರೀದಿಗೆ ಕ್ಯಾಂಪ್ಕೋ ಮುಂದಾಗುವಂತೆ ಸದಸ್ಯ ಗ್ರಾಹಕರು ಒತ್ತಾಯಿಸಿದರು. ಈಗಾಗಲೇ ಕ್ಯಾಂಪ್ಕೋ ಬ್ರಾಂಡ್‌ನಲ್ಲಿ ಪರಿಶುದ್ಧ ತೆಂಗಿನ ಎಣ್ಣೆ ಮಾರುಕಟ್ಟೆ ಪ್ರವೇಶಿಸಿದೆ. ಹೀಗಾಗಿ ತೆಂಗಿನಕಾಯಿ ಖರೀದಿ ಬಗ್ಗೆಯೂ ಕ್ಯಾಂಪ್ಕೋ ಮುಂದಾಗಬೇಕು ಎಂದು ಆಗ್ರಹಿಸಲಾಯಿತು.


ಕೇರಳ ಸರ್ಕಾರಕ್ಕೆ ಮನವಿ: ಕಳೆದ ಬಾರಿ ಬಿಡುಗಡೆಗೊಳಿಸಿದ ಕ್ಯಾಂಪ್ಕೋ ಬ್ರಾಂಡ್‌ನ ರಸಗೊಬ್ಬರವನ್ನು ಕೇರಳದಲ್ಲೂ
ಮಾರಾಟ ಮಾಡುವ ಬಗ್ಗೆ ಅಲ್ಲಿನ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲಿನ ಸರ್ಕಾರ ಅನುಮತಿಸಿದ ಬಳಿಕ ರಸಗೊಬ್ಬರ ಮಾರಾಟ ಸಾಧ್ಯವಾಗಲಿದೆ ಎಂದರು.


ಕ್ಯಾಂಪ್ಕೋ ಪ್ರತ್ಯೇಕ ಆ್ಯಪ್: ಕ್ಯಾಂಪ್ಕೋ ಸದಸ್ಯ ಗ್ರಾಹಕರ ಅನುಕೂಲಕ್ಕೆ ಕೃಷಿ ಮಾರುಕಟ್ಟೆಯ ಆಗು ಹೋಗುಗಳನ್ನು
ಸುಲಭವಾಗಿ ತಲುಪಿಸಲು ಪ್ರತ್ಯೇಕ ಆ್ಯಪ್ ರೂಪಿಸಲು ನಿರ್ಧರಿಸಲಾಗಿದೆ. ಇದರಿಂದ ಕ್ಯಾಂಪ್ಕೋ ಅಡಕೆ ಹಾಗೂ ಇತರೆ ಉತ್ಪನ್ನಗಳ ಧಾರಣೆ ಸಹಿತ ಎಲ್ಲ ಮಾಹಿತಿಯೂ ಆ್ಯಪ್‌ನಲ್ಲಿ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದರು.


ಕ್ಯಾಂಪ್ಕೋ ಯೋಜನೆ: ಸಂಸ್ಕರಿತ ಪೆಪ್ಪರ್‌ನ್ನು ಕ್ಯಾಂಪ್ಕೋ ಬ್ರಾಂಡ್‌ನಲ್ಲಿ ಶೀಘ್ರವೇ ಉತ್ತರ ಭಾರತ ಮಾರುಕಟ್ಟೆಗೆ ಪರಿಚಯಿಸಲಾಗುವುದು. ಕ್ಯಾಂಪ್ಕೋದ ಹೊಸ ಸ್ವಾದಭರಿತ ಚಾಕಲೇಟ್ ಉತ್ಪನ್ನ, ಹೊಸ ಬಗೆಯಲ್ಲಿ ತೆಂಗಿನ ಎಣ್ಣೆಯನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆಗೊಳಿಸುವುದಾಗಿ ಅವರು ಹೇಳಿದರು. ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಅಳವಡಿಕೆಗೆ ತೀರ್ಮಾನಿಸಲಾಗಿದೆ. ಕ್ಯಾಂಪ್ಕೋ ವಿಟ್ಲ ಶಾಖೆ ಹೊಸದಾಗಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಕ್ಯಾಂಪ್ಕೋ ಸುಪರ್ದಿಯಲ್ಲಿ ಕಾವಿನಲ್ಲಿ ಎಚ್‌ಪಿಸಿಎಲ್ ವತಿಯಿಂದ ಹೊಸ ಪೆಟ್ರೋಲ್ ಬಂಕ್ ನಿರ್ಮಿಸಲು ಚಿಂತಿಸಲಾಗಿದೆ ಎಂದರು.


ಬಯಲುಸೀಮೆಗೆ ವಿಸ್ತರಣೆ ಬೇಡಿಕೆ: ತುಮಕೂರು ಸೇರಿದಂತೆ ಬಯಲುಸೀಮೆಗೆ ಕ್ಯಾಂಪ್ಕೋ ಕಾರ್ಯ ವಿಸ್ತರಿಸುವಂತೆ
ಬೆಳೆಗಾರರೊಬ್ಬರು ಆಗ್ರಹಿಸಿದರು. ಬಯಲು ಸೀಮೆಯಲ್ಲಿ ಕ್ಯಾಂಪ್ಕೋಗೆ ಚಟುವಟಿಕೆಗೆ ಅಗತ್ಯವಾದ ಜಾಗ ಸುಲಭ ದರದಲ್ಲಿ ಲಭ್ಯವಾಗಲಿದೆ. ಅಲ್ಲದೆ ಅಡಕೆ, ತೆಂಗು ಬೆಳೆಗಾರರಿಗೆ ಅನುಕೂಲವಾಗಲು ಕ್ಯಾಂಪ್ಕೋ ಶಾಖೆ ಹಾಗೂ ಫ್ಯಾಕ್ಟರಿಯನ್ನು ಬಯಲು ಸೀಮೆಯಲ್ಲೂ ತೆರೆಯುವಂತೆ ಆಗ್ರಹಿಸಿದರು.


ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ದಯಾನಂದ ಹೆಗ್ಡೆ, ಕೃಷ್ಣಪ್ರಸಾದ್ ಮಡ್ತಿಲ, ಶಂಭುಲಿಂಗ ಜಿ.ಹೆಗ್ಡೆ, ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ ಪಟ್ಟಾಜೆ, ಎಂ.ಮಹೇಶ್ ಚೌಟ, ರಾಘವೇಂದ್ರ ಭಟ್ ಪಿ., ಜಯಪ್ರಕಾಶ್ ನಾರಾಯಣ ಟಿ.ಕೆ, ರಾಧಾಕೃಷ್ಣನ್, ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ, ರಾಘವೇಂದ್ರ ಎಚ್.ಎಂ.,
ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net