ಮಾಲೀಕರ ಕಣ್ಣೆದುರಲ್ಲೇ ಭಸ್ಮವಾದ ಬಿಎಂಡಬ್ಲೂೃ ಐಷಾರಾಮಿ ಕಾರು

mng--5 Sep car Fire
Published on

ಮಂಗಳೂರು : ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬಿಎಂಡಬ್ಲುೃ ಐಷಾರಾಮಿ ಕಾರು ಗುರುವಾರ ಬೆಳಗ್ಗೆ ಹಠಾತ್ತನೇ ಬೆಂಕಿ ಹತ್ತಿಕೊಂಡು ಮಾಲೀಕರ ಕಣ್ಣೆದುರಲ್ಲೇ ಸುಟ್ಟು ಬೂದಿಯಾಗಿದೆ.


ಕುಂದಾಪುರದ ದಯಾನಂದ ಶೆಟ್ಟಿ ಎಂಬವರ ಕಾರು ಇದಾಗಿದ್ದು ಅವರೇ ಉಡುಪಿಯಿಂದ ಮಂಗಳೂರಿಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಇಂಜಿನ್ ಭಾಗದಲ್ಲಿ ಬೆಂಕಿ ಕಂಡು ಬಂದಿದೆ. ಕಾರನ್ನು ಎನ್‌ಐಟಿಕೆ ಎದುರಿನ ರಸ್ತೆಯಲ್ಲೇ ನಿಲ್ಲಿಸಿ ಹೊರಕ್ಕೆ ಇಳಿದಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ನೋಡ ನೋಡುತ್ತಲೇ ಬೆಂಕಿಯ ಜ್ವಾಲೆ ಮೇಲೇರಿದ್ದು ಪ್ಲಾಸ್ಟಿಕ್ ಆಟಿಕೆಯಂತೆ ಕಾರು ಉರಿದಿದ್ದು ಸಂಪೂರ್ಣ ಸುಟ್ಟು ಹೋಗಿದೆ. ಸ್ಥಳದಲ್ಲಿ ವಾಹನ ಸಂಚಾರ ಬಂದ್ ಮಾಡಿ, ಜನರನ್ನು ಕೂಡ ದೂರ ನಿಲ್ಲಿಸಲಾಯಿತು. ಕಾರು ಸ್ಫೋಟಗೊಂಡ ರೀತಿ ಬೆಂಕಿ ಹತ್ತಿಕೊಂಡಿದ್ದು ಜನರು ನೋಡುತ್ತಲೇ ಮರುಗಿದ್ದಾರೆ. ಐಷಾರಾಮಿ ಕಾರು ಬೆಂಕಿಯಲ್ಲಿ ಲೀನವಾಗಿದ್ದನ್ನು ದಿಗ್ಭ್ರಮೆಯಿಂದ ಕಾರಿನ ಮಾಲೀಕ ರಸ್ತೆಯಲ್ಲಿ ನಿಂತು ನೋಡುವಂತಾಗಿತ್ತು.


ಮಂಗಳೂರು ಸಂಚಾರ ಉತ್ತರ ಠಾಣಾ ಪೊಲೀಸರು, ಸುರತ್ಕಲ್ ಠಾಣೆ ಪೊಲೀಸರು, ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಡೀಸೆಲ್ ಬಳಸುತ್ತಿದ್ದ ಬಿಎಂಡಬ್ಲ್ಯು ಕಾರು ಇದಾಗಿದ್ದು, ನಡು ರಸ್ತೆಯಲ್ಲಿ ಈ ರೀತಿ ಉರಿದು ಹೋಗಿದ್ದು ಭಾರೀ ಅಚ್ಚರಿಗೆ ಕಾರಣವಾಗಿದೆ. ಕಾರಿಗೆ ಬೆಂಕಿ ಹತ್ತಿಕೊಳ್ಳಲು ಕಾರಣವಾದ ಅಂಶ ಏನೆಂದು ಬಿಎಂಡಬ್ಲ್ಯು ಕಂಪನಿಯವರೇ ಹೇಳಬೇಕು. ಮೊದಲಿಗೆ, ಇಲೆಕ್ಟಿಕ್ ಕಾರು ಎಂದು ಹೇಳಲಾಗಿತ್ತು. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಡೀಸೆಲ್ ಕಾರು ಎಂದು ಖಚಿತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net