ಆಟಿದ ಪರ್ಬ ತುಳುನಾಡಿನ ಮಣ್ಣಿನ ಸೊಬಗು ನೀರು ಸೇದುವ ಮೂಲಕ ಉದ್ಘಾಟಿಸಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಅಭಿಮತ

atida
Published on

ಮಂಗಳೂರು: ಆಟಿದ ಪರ್ಬ ತುಳುನಾಡಿನ ಮಣ್ಣಿನ ಸೊಬಗು. ಇಂದಿನ ತಲೆಮಾರಿಗೆ ಪೂರ್ವಜರ ಆಟಿ ತಿಂಗಳ ಆಚರಣೆ, ಆಹಾರ ಪದ್ಧತಿಗಳನ್ನು ತಿಳಿಯಪಡಿಸುವುದು ಉತ್ತಮ ವಿಚಾರ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಅಭಿಪ್ರಾಯ ಪಟ್ಟರು.


ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ಭಾನುವಾರ ನಡೆದ ಆಟೊದ ಪರ್ಬ ಕಾರ್ಯಕ್ರಮವನ್ನು ಸಾಂಪ್ರಾಯಿಕ ಶೈಲಿಯಲ್ಲಿ ಬಾವಿಯಿಂದ ನೀರು ಸೇದುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.


ಆಟಿ ಕಳಂಜದ ವಿಶೇಷತೆ ಹಾಗೂ ಹಿನ್ನೆಲೆಯ ಬಗ್ಗೆ ಮಾತನಾಡಿದ ಮುಖ್ಯ ಅತಿಥಿ ವಸಂತ್ ಕುಮಾರ್ ಶೆಟ್ಟಿ, ಆಟಿ ತಿಂಗಳಲ್ಲಿ ಮನೆ ಮನೆಯ ರೋಗ-ರುಜಿನಗಳನ್ನು ಅನಾರೋಗ್ಯವನ್ನು ದೂರ ಮಾಡಲೆಂದೇ ಆಟಿ ಕಳಂಜ ಬರುವನೆಂಬ ನಮ್ಮ ಹಿರಿಯರ ನಂಬಿಕೆ ಯಾವುದೇ ಮೂಢನಂಬಿಕೆಯಲ್ಲ. ಪ್ರತಿಯೊಂದು ಧಾರ್ಮಿಕ ನಂಬಿಕೆಯ ಹಿಂದೆಯೂ ವೈಜ್ಞಾನಿಕ ಹಿನ್ನಲೆ ಇರುವುದೇ ನಮ್ಮ ಸಂಸ್ಕೃತಿಯ ಶ್ರೇಷ್ಠತೆ. ಪುರಿ ಜಗನ್ನಾಥನ ರಥೋತ್ಸವವೇ ಇದೇ ಸಮಯದಲ್ಲಿ ನಡೆಯುವುದರಿಂದ ಇಲ್ಲಿ ಅಶುಭ ತಿಂಗಳು ಎನ್ನುವ ಮಾತೇ ಬರುವುದಿಲ್ಲ ಎಂದರು.


ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ನಮ್ಮ ಹಿರಿಯರು ಆಟಿಯ ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೂ ಎಷ್ಟು ಕಷ್ಟ ಪಡುತ್ತಿದ್ದರು, ಆ ಸಮಯದಲ್ಲಿ ಪ್ರಕೃತಿದತ್ತವಾಗಿ ಸಿಗುವ ಆಹಾರ ಪದಾರ್ಥಗಳನ್ನೇ ಬಳಸಿಕೊಂಡು ಹೇಗೆ ಬದುಕಿದರು ಎಂಬುದನ್ನು ಅರಿಯುವುದೇ ಈ ಕಾರ್ಯಕ್ರಮದ ಉದ್ದೇಶ. ತುಳುನಾಡ ಪ್ರಾಚೀನ ಸಂಪ್ರದಾಯ, ಆಚಾರ-ವಿಚಾರಗಳನ್ನು ಇಂದಿನ ಯುವ ಜನಾಂಗಕ್ಕೆ ಮಾತ್ರವಲ್ಲದೇ, ಭವಿಷ್ಯದ ಪೀಳಿಗೆಯಲ್ಲಿ ಆಸಕ್ತಿ ಮೂಡಿಸುವ ಆಶಯದೊಂದಿಗೆ ಈ ಕಾರ್ಯಕ್ರಮ ನಡೆಸಲಾಗಿದ್ದು ತುಳು ಭಾಷೆ-ಸಂಪ್ರದಾಯ- ಆಚರಣೆಗಳು ಸದಾ ಕಾಲಕ್ಕೂ ಶಾಶ್ವತವಾಗಿ ಉಳಿಯಬೇಕು ಎಂದರು.


ವೇದಿಕೆಯ ಮುಂಭಾಗದಲ್ಲಿ ತುಳುನಾಡಿನ ಜನಪದ ಸಂಸ್ಕೃತಿ, ಕೃಷಿ ಪದ್ಧತಿ, ಕೃಷಿ ಸಲಕರಣೆಗಳ ಅನಾವರಣದ ಚಿತ್ರಣವಿದ್ದು, ಅದು ನಮ್ಮ ಪೂರ್ವಜರು ಎಷ್ಟು ಕಷ್ಟಕರ ಹಾಗೂ ಪರಿಶ್ರಮದಿಂದ ಜೀವನ ಸಾಗಿಸುತ್ತಿದ್ದರು ಎಂಬುದನ್ನು ಬಿಂಬಿಸುತ್ತಿತ್ತು. ಪ್ರಸ್ತುತ ಕಾಲ ಘಟ್ಟದಲ್ಲಿ ಸಕಲ ಸೌಕರ್ಯಗಳಿದ್ದರೂ ಚಡಪಡಿಕೆಯ ಜೀವನ ನಡೆಸುತ್ತಿರುವ ನಾವುಗಳು ಬದುಕಿನ ವಾಸ್ತವವನ್ನು ಅರಿಯುವಂತೆ ಮಾಡಿತು.


ಗ್ರಾಮೀಣ ಕ್ರೀಡೆ ಸೊಗಡು
ತುಳುನಾಡ ಜನಪದ ಕ್ರೀಡೆಗಳಾದ ಕೋಳಿ ಅಂಕ, ತೆಂಗಿನ ಕಾಯಿ ಕುಟ್ಟುವುದು ಮುಂತಾದ ಗ್ರಾಮೀಣ ಸೊಗಡಿನ ಕ್ರೀಡೆಗಳ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಪಾಲಿಕೆ ಸದಸ್ಯೆಯರು, ಕಾರ್ಯಕರ್ತೆಯರು ಹಾಗೂ ಮಕ್ಕಳು ತುಳುನಾಡಿನ ಗೀತೆಗೆ ಹೆಜ್ಜೆ ಹಾಕಿದರು. ಅಲ್ಲದೇ ಹುಲಿವೇಷ ನೃತ್ಯವು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತು.


108 ಬಗೆಯ ತಿನಿಸು: ಮಧ್ಯಾಹ್ನದ ವೇಳೆಗೆ ತುಳುನಾಡಿನ ಆಹಾರ ಪದ್ಧತಿಯ 108 ಬಗೆ ಬಗೆಯ ತಿನಿಸುಗಳು ಆಟಿದ ಪರ್ಬದ ಪ್ರಮುಖ ಆಕರ್ಷಣೆಯಾಗಿದ್ದವು. ಸೇರಿದ್ದ ಜನರು ತುಳುನಾಡಿನ ಪ್ರತಿಯೊಂದು ಆಹಾರವನ್ನು ತಮ್ಮ ಹಳೇ ದಿನಗಳನ್ನು ಮೆಲುಕು ಹಾಕುತ್ತಾ ಸವಿದರು. ಭೋಜನದ ನಂತರ ವಿವಿಧ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದ ಆರಂಭದಿಂದಲೂ ಆಟಿ ಕಳಂಜನು ಸಭಾಂಗಣದಲ್ಲಿ ಸುತ್ತುತ್ತಾ ಮನೆ ಮನೆಯ ಮಾರಿ ನಿವಾರಿಸುವುದನ್ನು ಬಿಂಬಿಸುತ್ತಿದ್ದನು.


ಕಾರ್ಯಕ್ರಮದ ಯಶಸ್ಸಿಗೆ ಮಂಗಳೂರು ನಗರ ದಕ್ಷಿಣ ಮಂಡಲದ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾದ ಕಾರ್ಯಕರ್ತರು ಶ್ರಮಿಸಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ಮುಖಂಡರಾದ ರಮೇಶ್ ಕಂಡೆಟ್ಟು, ಸಂಜಯ್ ಪ್ರಭು, ವಸಂತ ಜೆ. ಪೂಜಾರಿ, ಅಶ್ವಿತ್ ಕೊಟ್ಟಾರಿ, ಪೂರ್ಣಿಮಾ, ಸತೀಶ್ ಪ್ರಭು, ಮೋನಪ್ಪ ಭಂಡಾರಿ, ನಾಗರಾಜ್ ಶೆಟ್ಟಿ, ರಾಕೇಶ್ ರೈ, ರಮೇಶ್ ಹೆಗ್ಡೆ, ಲಲ್ಲೇಶ್, ಯತೀಶ್ ಅರ್ವರ್, ನಾರಾಯಣ ಗಟ್ಟಿ ಸೇರಿದಂತೆ ಮಂಡಲದ ಪ್ರಮುಖರು, ಪದಾಧಿಕಾರಿಗಳು, ಪಾಲಿಕೆ ಸದಸ್ಯರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net