ಮಂಗಳೂರು: ಬಿಜೈನ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್‌ನಲ್ಲಿ ಮಾದಕ ವಸ್ತು ಬೆರೆಸಿ ಸೇವನೆ ಮಾಡಿದ ಇಬ್ಬರನ್ನು ಬರ್ಕೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಜೈ ಆನೆಗುಂಡಿ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಸಿಗರೇಟು ಸೇದುತ್ತಿದ್ದ ಕೇರಳ ಕೋಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ನಿವಾಸಿ ಮಹಮ್ಮದ್ ಶಾಮಿಲ್ (21) ಎಂಬಾತನನ್ನು ಸಂಶಯದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆತ ಸಿಗರೇಟಿನಲ್ಲಿ ಮಾದಕ ವಸ್ತುವನ್ನು ತುಂಬಿಸಿ ಸೇದುತ್ತಿರುವ ಬಗ್ಗೆ ತಪ್ಪನ್ನು ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
ಇನ್ನೊಂದು ಪ್ರಕರಣದಲ್ಲಿ ಬಿಜೈ ನ್ಯೂ ರೋಡ್ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಸಿಗರೇಟು ಸೇದುತ್ತಿದ್ದ ಮಲಪ್ಪುರ ಜಿಲ್ಲೆಯ ಪೆರುಂಪಡಪ್ಪು ನಿವಾಸಿ ಮೊಹಮ್ಮದ್ ಸ್ವಾನ್ (22) ಎಂಬಾತನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ದೃಢಪಟ್ಟಿದೆ. ಈ ಎರಡು ಪ್ರಕರಣಗಳ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.