

ವಿಜಯವಾಣಿ ಸುದ್ದಿಜಾಲ ನೆಲ್ಯಾಡಿ.
ಮಂಗಳೂರು ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ಪ್ರಯಾಣವು ಸಂಚಾರಕ್ಕೆ ಮುಕ್ತವಾಗಿದೆ. ಜು. 31 ರ ಸಂಜೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ದೊಡ್ಡ ತಪ್ಪಲು ಎಂಬಲ್ಲಿ ಗುಡ್ಡ ಜರಿದು, ಮಣ್ಣುಗಳ ರಾಶಿ ಹೆದ್ದಾರಿ ರಸ್ತೆಗೆ ಬಿದ್ದು ವಾಹನ ಸಂಚಾರ ಸ್ಥಗಿತಗೊಂದಿತ್ತು. ಮಣ್ಣುಗಳ ರಾಶಿ ತೆರವುಗೊಳಿಸಿದ ಬಳಿಕ ನಿಧಾನ ಗತಿಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆಗಸ್ಟ್ 4 ರ ಸಂಜೆಯಿಂದ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೋರಾದ ಮಳೆಗೆ ಗುಡ್ಡ ಕುಸಿತ ಉಂಟಾದಲ್ಲಿ ವಾಹನಗಳು ಮತ್ತೆ ವಿಧಾನ ಗತಿಯಲ್ಲಿ ಸಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದರೆ ಭಾನುವಾರದಿಂದ ಮಳೆ ಪ್ರಮಾಣ ಇಳಿಕೆಯಾಗಿದೆ.
ಗುಂಡ್ಯ ಚೆಕ್ ಪೋಸ್ಟ್ ಬಳಿ ನೆಲ್ಯಾಡಿ ಹೊರ ಠಾಣಾ ಪೊಲೀಸರು ಸಂಚಾರ ದಟ್ಟಣೆಯ ಮೇಲೆ ನಿಗಾ ವಹಿಸುತ್ತಿದ್ದಾರೆ.
ಸಂಚಾರ ಸ್ಥಗಿತಗೊಂಡರೆ ಕೊಕ್ಕಡ - ನೆಲ್ಯಾಡಿ ಪ್ರಯಾಣಿಕರಿಗೆ ಸಂಕಷ್ಟ
ರಾ. ಹೆ. 75ರ ಶಿರಾಡಿ ಘಾಟಿಯ ಮೂಲಕ ಸಂಚಾರ ಸ್ಥಗಿತಗೊಂಡರೆ ನೆಲ್ಯಾಡಿ ಹಾಗೂ ಕೊಕ್ಕಡದ ಪ್ರಯಾಣಿಕರು ಸಂಕಷ್ಟಕ್ಕಿಡಾಗುತ್ತಾರೆ. ಕೊಕ್ಕಡದ ಪ್ರಯಾಣಿಕರು ಧರ್ಮಸ್ಥಳಕ್ಕೆ ಬಂದು ಚಾರ್ಮಾಡಿ ಘಾಟಿ ಮೂಲಕ ಪ್ರಯಾಣಿಸಬೇಕಾಗುತ್ತದೆ. ನೆಲ್ಯಾಡಿ ಪ್ರಯಾಣಿಕರು ಉಪ್ಪಿನಂಗಡಿ ಮೂಲಕ ಉಜಿರೆಯನ್ನು ಬಂದು ಚಾರ್ಮಾಡಿ ಘಾಟಿ ಮೂಲಕ ತೆರಳಬೇಕಾಗುತ್ತದೆ. ಮಾನ್ಯ ಮೂಲಕ ಸಂಪಾಜೆ ಸಂಪರ್ಕಿಸಿ ತೆಳಬೇಕಾಗುತ್ತದೆ. ಈ ಪ್ರಯಾಣ ಅನವಶ್ಯಕ ಸಾರಿಗೆ ವೆಚ್ಚವನ್ನು ತರುವುದಲ್ಲದೆ, ರಾತ್ರಿಯ ಪ್ರಯಾಣಕ್ಕೆ ಕಷ್ಟವಾಗಿದೆ. ಪ್ರಸ್ತುತ ಶಿರಾಡಿ ಘಾಟಿಯ ಮೂಲಕ ಪ್ರಯಾಣಕ್ಕೆ ಅವಕಾಶವಿದ್ದರೂ ಧರ್ಮಸ್ಥಳ ಸಾರಿಗೆ ಸಂಸ್ಥೆ ಇಲಾಖೆಯ ಅಧಿಕಾರಿಗಳು ಶಿರಾಡಿ ಮೂಲಕದ ಪಯಣ ಸಂಜೆ 6 ಗಂಟೆಯ ಬಳಿಕ ನಿಷೇಧಿಸಿದೆ ಎನ್ನುತ್ತಿದ್ದಾರೆ. ಆದರೆ ಧರ್ಮಸ್ಥಳ ಸಾರಿಗೆ ನಿಗಮದ ಬಸ್ಸುಗಳು ಭಾನುವಾರದಿಂದಲೂ ಶಿರಾಡಿ ಘಾಟಿ ಮೂಲಕ ಸಂಚರಿಸುತ್ತಿದೆ. ಅಧಿಕಾರಿಗಳು ಇದನ್ನು ಅಲ್ಲಗಳೆಯುತ್ತಿದ್ದಾರೆ.