

ಮಂಗಳೂರು: ಕರಾವಳಿಯಾದ್ಯಂತ ಶುಕ್ರವಾರ ಆಯುಧ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು. ಹೂವುಗಳಿಂದ ಅಲಂಕರಿಸಿದ ವಾಹನಗಳು, ಆಯುಧ, ಯಂತ್ರೋಪಕರಣ, ಕಂಪ್ಯೂಟರ್‌ಗಳಿಗೆ ಪೂಜೆ ನೆರವೇರಿಸಿದರು.
ಬೆಳಗ್ಗೆಯಿಂದಲೇ ವಾಹನ ಪೂಜೆ ಮಾಡಿಸಲು ಭಕ್ತರು ದೇವಾಲಯಗಳಲ್ಲಿ ನೆರೆದಿದ್ದರು. ಲಕ್ಷಾಂತರ ವಾಹನಗಳಿಗೆ ಪೂಜೆ ನಡೆಸಲಾಯಿತು. ಗ್ಯಾರೇಜ್, ಇಂಜಿಯರಿಂಗ್ ವರ್ಕ್ಸ್, ಪೊಲೀಸ್ ಠಾಣೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮೊದಲಾದ ಕಡೆಯೂ ಪೂಜೆ ನೆರವೇರಿತು.
ಮಂಗಳೂರಿನ ಶರವು ಶ್ರೀ ಮಹಾಗಣಪತಿ, ಉರ್ವಸ್ಟೋರ್ ಶ್ರೀ ಗಣಪತಿ ದೇವಾಲಯ, ಶ್ರೀ ಮಂಗಳಾದೇವಿ ಕ್ಷೇತ್ರ, ಕದ್ರಿ ಶ್ರೀ ಮಂಜುನಾಥ ಕ್ಷೇತ್ರ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ, ಕೊಂಚಾಡಿ ಶ್ರೀ ನಾಗಕನ್ನಿಕ ಕ್ಷೇತ್ರ, ಕಾವೂರು ಶ್ರೀ ಮಹಾಲಿಂಗೇಶ್ವರ ಮೊದಲಾದ ದೇವಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಪೂಜೆ ನಡೆಯಿತು.
ಜನ ದಟ್ಟಣೆ: ಕರಾವಳಿಯ ಪ್ರಮುಖ ದೇವಾಲಯಗಳು, ಪ್ರೇಕ್ಷಣೀಯ ಸ್ಥಳಗಳಲ್ಲಿ ಕಳೆದ ಮೂರು ದಿನಗಳಿಂದ ಜನ ದಟ್ಟಣೆ ಕಂಡು ಬಂತು. ನಿರಂತರವಾಗಿ ಮೂರು ದಿನ ರಜಾ ಇರುವುದರಿಂದ ಹೊರ ರಾಜ್ಯ, ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಕುಕ್ಕೇ ಶ್ರೀ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯ ಮೊದಲಾದ ಕಡೆ ಭಕ್ತರ ಗಢಣ ಹೆಚ್ಚಾಗಿತ್ತು.