

ಮಂಗಳೂರು: ಜಮ್ಮು ಕಾಶ್ಮೀರದ ಪೂಂಛ್‌ನಲ್ಲಿ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಕುಂದಾಪುರದ ಬೀಜಾಡಿಯ ಯೋಧ ಲ್ಯಾನ್ಸ್ ಹವಾಲ್ದಾರ್ ಅನೂಪ್ ಪೂಜಾರಿ (31) ಅವರ ಪಾರ್ಥೀವ ಶರೀರವನ್ನು ಬುಧವಾರ ತಡರಾತ್ರಿ ಒಂದು ಗಂಟೆ ಸುಮಾರಿಗೆ ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು.
ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ವಿಮಾನ ನಿಲ್ದಾಣದಲ್ಲಿ ಸೇನಾ ವಿಮಾನದಿಂದ ಪಾರ್ಥೀವ ಶರೀರವನ್ನು ಹೊರಗೆ ತೆಗೆಯುವ ವೇಳೆ ಶವ ಪಟ್ಟಿಗೆಗೆ ಹೆಗಲು ನೀಡಿದರು. ಮಾಜಿ ಯೋಧರೂ ಆಗಿರುವ ಕ್ಯಾ.ಬ್ರಿಜೇಶ್ ಚೌಟ ಅಗಲಿದ ಯೋಧನಿಗೆ ಅಂತಿಮ ನಮನ ಸಲ್ಲಿಸಿ, ಶವ ಪೆಟ್ಟಿಗೆ ಹೊತ್ತುಕೊಂಡು ಸೇನಾ ವಾಹನದತ್ತ ಬಂದರು. ಈ ಸಂದರ್ಭದಲ್ಲಿ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೂ ಜೊತೆಗಿದ್ದು ಅಗಲಿದ ಯೋಧನಿಗೆ ನಮಿಸಿ ಸೇನಾ ಸಿಬಂದಿ ಜೊತೆಗೆ ನಿಂತರು. ಮಾಜಿ ಯೋಧ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್. ಅವರೂ ಸೇನಾ ಸಿಬಂದಿಗಳಿಗೆ ಜತೆಯಾದರು.