ಸಂಘ ಸಂಸ್ಥೆಗಳ ಸಹಕಾರದಿಂದ ಅಮೂಲಾಗ್ರ ಬದಲಾವಣೆ ಪೌಷ್ಟಿಕ ಆಹಾರ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಉಸ್ಮಾನ್ ಎ. ಅಭಿಮತ

mng-june13-zp
Published on


ಮಂಗಳೂರು: ಸರ್ಕಾರದ ಜತೆ ಸಂಘ ಸಂಸ್ಥೆಗಳು ಕೈ ಜೋಡಿಸಿದಾಗ ಯೋಜನೆಗಳು ನಿಗದಿತ ಗುರಿ ತಲುಪಿ ಅಮೂಲಾಗ್ರ ಬದಲಾವಣೆ ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ. ಹೇಳಿದರು.


ಅದಾನಿ ವಿಲ್ಮಾರ್, ಅದಾನಿ ಫೌಂಡೇಶನ್, ಫೋರ್ಚುನ್ ಸುಪೋಶನ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡ ‘ಸಮುದಾಯದಲ್ಲಿ ಆರೋಗ್ಯಕರ, ಪೌಷ್ಟಿಕ ಆಹಾರದ ಜಾಗೃತಿ’ ವಿಷಯದಲ್ಲಿ ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡ ಕಾರ್ಯಾಗಾರ ಉದ್ಘಾಟಿಸಿ, ಅವರು ಮಾತನಾಡಿದರು.


ಜಿಲ್ಲೆಯಲ್ಲಿ 2130 ಅಂಗನವಾಡಿ ಕೇಂದ್ರಗಳಿದ್ದು, ಅಪೌಷ್ಟಿಕ ಮಕ್ಕಳಿರುವ 100 ಅಂಗನವಾಡಿಗಳನ್ನು ಅದಾನಿ ಸುಪೋಷಣ್ ಸಂಸ್ಥೆಗೆ ಮಕ್ಕಳ ಪೌಷ್ಟಿಕತೆ ವೃದ್ಧಿಗೆ ನೀಡಲಾಗಿದೆ. ಈ ಕಾರ್ಯಾಗಾರದ ಮೂಲಕ ಇಲಾಖೆ ಮತ್ತು ಸಂಸ್ಥೆಯ ನಡುವೆ ಸಂವಾದ ನಡೆದು ಯೋಜನೆ ಪರಿಣಾಮಕಾರಿಯಾಗಿ ತಲುಪಲು ಸಾಧ್ಯ ಎಂದರು.


ಅದಾನಿ ವಿಲ್ಮಾರ್ ಸಂಸ್ಥೆಯ ಮುಖ್ಯಸ್ಥ ಮನೋಜ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಸಮಾಜದ ಸಶಸ್ತೀಕರಣಕ್ಕೆ ಸುಪೋಷಣ್ ಯೋಜನೆ ದೇಶದ 14 ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದೆ. ಅಪೌಷ್ಟಿಕತೆಯನ್ನು ಹೋಗಲಾಡಿಸಿ ಆರೋಗ್ಯವಂತ ಮಕ್ಕಳನ್ನು ಸಮಾಜಕ್ಕೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.


ಅಲೋಶಿಯಸ್ ಡೀಮ್ಡ್ ವಿವಿ ಆಹಾರ ವಿಜ್ಞಾನ ವಿಭಾಗದ ಆಹಾರ ತಜ್ಞ ಡಾ.ಆದರ್ಶ ಗೌಡ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪೌಷ್ಟಿಕ ಆಹಾರದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಆಹಾರದ ಮಾರ್ಗದರ್ಶನದ ಕೊರತೆಯಿಂದ ಅನಾರೋಗ್ಯ ಹೆಚ್ಚಾಗಲು ಕಾರಣವಾಗಿದೆ. ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಂಡರೆ ಔಷಧಿ ಬೇಕಾಗಿಲ್ಲ ಎಂದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ರಶ್ಮೀ, ಅದಾನಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಶಾಂತ ಕುಮಾರ್ ಕೆ. ಮೊದಲಾದವರು ಉಪಸ್ಥಿತರಿದ್ದರು.


ಅದಾನಿ ಫೌಂಡೇಶನ್‌ನ ಉಪಯೋಜನಾಧಿಕಾರಿ ರೊಝೀನಾ ಸುಲ್ತಾನ ಕಾರ್ಯಕ್ರಮ ಸಂಘಟಿಸಿದ್ದರು. ಅದಾನಿ ಸುಪೋಷನ್‌ನ ಅಧಿಕಾರಿ ಡಾ.ಪ್ರೇಮಾ ಡಿಸೋಜ ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿದರು. ಚೈತ್ರಾ ಸ್ವಾಗತಿಸಿದರು. ರಶ್ಮೀ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net