ಆಕಾಶಭವನ ಶ್ರೀ ನಾರಾಯಣ ಗುರುವನ ಮುಕ್ತಿಧಾಮ ರುದ್ರಭೂಮಿಯಲ್ಲಿ ರಿಷಿ ಹಸಿರು ಹಬ್ಬ-2024

mng--24 Aug Rishi
Published on


ಮಂಗಳೂರು: ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇದರ ಆಶ್ರಯದಲ್ಲಿ ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಸಹಯೋಗದಲ್ಲಿ ಹಚ್ಚ ಹಸಿರು ಸ್ವಚ್ಛ ಉಸಿರು ಪರಿಕಲ್ಪನೆಯೊಂದಿಗೆ ರಿಷಿ ಹಸಿರು ಹಬ್ಬ-2024 ಕಾರ್ಯಕ್ರಮ ನಗರದ ಆಕಾಶಭವನ ಶ್ರೀ ನಾರಾಯಣ ಗುರುವನ ಮುಕ್ತಿಧಾಮ ರುದ್ರಭೂಮಿಯಲ್ಲಿ ಇತ್ತೀಚೆಗೆ ನಡೆಯಿತು.


ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ಫಾದರ್ ಮೆಲ್ವಿನ್ ಪಿಂಟೊ, ಸಂಘಸಂಸ್ಥೆಗಳು, ಅರಣ್ಯ ಇಲಾಖೆ ಪರಿಸರ ದಿನ, ವನಮಹೋತ್ಸವ ಸಂದರ್ಭದಲ್ಲಿ ಪಕ್ಷಿ ಸಂಕುಲದ ಬಗ್ಗೆಯೂ ಚಿಂತನೆ ನಡೆಸಬೇಕಾಗಿದೆ. ಮರಗಳನ್ನೇ ನಂಬಿ ಬದುಕುವ ಪಕ್ಷಿಗಳನ್ನು ಉಳಿಸಲು ಅಕೇಶಿಯಾ, ಹೊನ್ನೆ, ಬೀಟಿ, ತೇಗದಂತಹ ಮರಗಳನ್ನು ಬೆಳೆಸುವ ಬದಲು ಅವುಗಳಿಗೆ ಆಹಾರವಾಗಬಲ್ಲ ಹಣ್ಣಿನ ಗಿಡಗಳನ್ನು ಬೆಳೆಸುವತ್ತ ಚಿಂತಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಅವಿನಾಶ್ ಕುಲಾಲ್ ಮಾತನಾಡಿ, ರಿಷಿ ಪ್ರತಿಷ್ಠಾನ ಸಸಿಗಳನ್ನು ನೆಡುವುದರ ಜೊತೆಗೆ ಅವುಗಳ ಪೋಷಣೆಯ ಜವಾಬ್ದಾರಿ ಹೊತ್ತುಕೊಳ್ಳುತ್ತಿದೆ. ಇದೇ ಕಾರಣದಿಂದ ಜಿಲ್ಲೆಯ ಹಲವೆಡೆ ಪ್ರತಿಷ್ಠಾನದ ವತಿಯಿಂದ ನೆಟ್ಟ ಗಿಡಗಳು ಮರವಾಗಿ ನಳನಳಿಸುತ್ತಿದೆ ಎಂದರು.


ಮುಖ್ಯ ಅತಿಥಿಯಾಗಿದ್ದ ಅಲೋಶಿಯಸ್ ಪರಿಗಣಿತ ವಿವಿ ಕುಲಪತಿ ಫಾದರ್ ಮೆಲ್ವಿನ್ ಡಿಕುನ್ಹಾ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಫ್ರೂಟ್ ಸಿಟಿ ಇನಿಶಿಯೇಟಿವ್ ಕೋ ಆರ್ಡಿನೇಟರ್ ಅರ್ಜುನ್ ಮಸ್ಕರೇನಸ್, ಪ್ರಮುಖರಾದ ಆನಂದ ಪಾಂಗಳ್, ಶ್ರೀ ದುರ್ಗಾ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಹರಿಣಾಕ್ಷಿ, ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಸಂಚಾಲಕಿ ದೇವಿಕಾ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net