

ಮಂಗಳೂರು: ಮಂಗಳೂರು ನಗರದಲ್ಲಿ 19 ನಿಷೇಧಿತ ಪ್ಲಾಸ್ಟಿಕ್ ಲಭಿಸಿದ್ದು, ಅದರಲ್ಲೂ 5 ಅತೀ ಅಪಾಯಕಾರಿ ಪ್ಲಾಸ್ಟಿಕ್ ವಸ್ತುಗಳು ಬಳಕೆಯಲ್ಲಿರುವುದು ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ನ್ಯಾಷನಲ್ ಪ್ರೊಡಕ್ಟಿವಿಟಿ ಕೌನ್ಸಿಲ್‌ನ ಅಸಿಸ್ಟೆಂಟ್ ಡೈರೆಕ್ಟರ್ ಮಹೋತ್ಸವ್ ಹೇಳಿದ್ದಾರೆ.
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಏಕಬಳಕೆಯ ಪ್ಲಾಸ್ಟಿಕ್ ನಿಷೇಧದ ಕುರಿತು ಹಾಗೂ ಪರ್ಯಾಯ ವಸ್ತುಗಳ ಬಳಕೆಯ ಬಗ್ಗೆ ಮೇಯರ್ ಮನೋಜ್ ಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ಪಾಲಿಕೆಯಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಏಕಬಳಕೆ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಅನುಷ್ಠಾನ ಪರಾಮರ್ಶೆಯನ್ನು ದೇಶದ ಆಗ್ರಾ, ಪಾಟ್ನ, ವಡೋದರ ಹಾಗೂ ಮಂಗಳೂರಿನಲ್ಲಿ ನ್ಯಾಷನಲ್ ಪ್ರೊಡಕ್ಟಿವಿಟಿ ಕೌನ್ಸಿಲ್ ಮೂಲಕ ಕೇಂದ್ರ ಸರ್ಕಾರ ನಡೆಸುತ್ತಿದೆ. ಏಕಬಳಕೆಯ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮಂಗಳೂರಿನಲ್ಲಿ ಈಗಾಗಲೇ ನಮ್ಮ ಸಂಸ್ಥೆ ವತಿಯಿಂದ ಪರಿಶೀಲನೆ ಹಾಗೂ ಅವಲೋಕನ ನಡೆಸಲಾಗಿದೆ. ನಗರದ ಬಹುತೇಕ ಕಡೆಯಲ್ಲಿ ಪ್ಲಾಸ್ಟಿಕ್ ಕೈ ಚೀಲ, ಪ್ಲಾಸ್ಟಿಕ್ ಲೋಟ ಬಳಕೆಯೇ ಅಧಿಕವಾಗಿರುವುದು ನಮಗೆ ತಿಳಿದು ಬಂದಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಹಾಗೂ ಅದರಿಂದ ಸಮಸ್ಯೆ ಇದೆ ಎಂಬ ಬಗ್ಗೆ ಜನರಿಗೆ ಅರಿವು ಇದೆ. ಆದರೆ, ಸರ್ಕಾರ-ಆಡಳಿತ ವ್ಯವಸ್ಥೆಯೇ ಇದರ ಬಳಕೆಗೆ ಕಡಿವಾಣ ಹಾಕಬೇಕು ಎಂಬ ಮನೋಭೂಮಿಕೆಯಲ್ಲಿದ್ದಾರೆ ಎಂದರು.
ಹಸಿರುದಳ ಸಂಘಟನೆಯ ನಾಗರಾಜ್ ಹಾಗೂ ಮನಪಾ ಸದಸ್ಯ ಜಗದೀಶ್ ಶೆಟ್ಟಿ ಮಾತನಾಡಿ, ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಇದ್ದರೂ ಅದರ ಉತ್ಪಾದನೆಯನ್ನೇ ನಿಲ್ಲಿಸುವ ಕೆಲಸ ಯಾಕೆ ನಡೆಯುವುದಿಲ್ಲ? ಉತ್ಪಾದನೆಯೇ ಆಗದಿದ್ದರೆ ಬಳಕೆಯ ಪ್ರಶ್ನೆಯೇ ಇಲ್ಲ ಎಂದರು.
ನ್ಯಾಷನಲ್ ಪ್ರೊಡಕ್ಟಿವಿಟಿ ಕೌನ್ಸಿಲ್‌ನ ಪ್ರಮುಖರೊಬ್ಬರು ಆನ್‌ಲೈನ್ ಮೂಲಕ ಇದಕ್ಕೆ ಉತ್ತರಿಸಿ, ಕೆಲವು ಅಗತ್ಯದ ವಸ್ತುಗಳ ಬಳಕೆಗೆ ಕೆಲವು ಪ್ಲಾಸ್ಟಿಕ್ ಅನಿವಾರ್ಯ ಎಂಬ ಸ್ಥಿತಿ ಜನರಲ್ಲಿದೆ. ಇದನ್ನು ಒಂದೇ ಸಮಯ ನಿಲ್ಲಿಸಿದರೆ ಆಹಾರ ವಸ್ತುಗಳ ಕೊಂಡೊಯ್ಯುವ ವ್ಯವಸ್ಥೆಯಲ್ಲಿ ಬಹುದೊಡ್ಡ ಕೊರತೆ, ಕಂಪನ ಎದುರಾಗಬಹುದು. ಹೀಗಾಗಿ, ಪ್ಲಾಸ್ಟಿಕ್ ಉತ್ಪಾದನೆಯನ್ನು ಹಂತ ಹಂತವಾಗಿ ನಿಲ್ಲಿಸಬೇಕಾಗಿದೆ. ಆ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆಗೆ ಜನರು ಒಗ್ಗಿಕೊಳ್ಳುವುದೇ ಪೂರಕ ಹೆಜ್ಜೆಯಾಗಿರುತ್ತದೆ ಎಂದರು.
ಎಪಿಡಿ ಫೌಂಡೇಶನ್‌ನ ಗೀತಾ ಸೂರ್ಯ ಮಾತನಾಡಿ, ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ಬಗ್ಗೆ ಜನರು ಆಸಕ್ತಿ ವಹಿಸಿದರೂ ಅಂಗಡಿಯವರೇ ಪ್ಲಾಸ್ಟಿಕ್ ಬಳಕೆಯನ್ನು ಹೆಚ್ಚು ನೆಚ್ಚಿಕೊಂಡಂತಿದೆ. ಬಟ್ಟೆ ಬ್ಯಾಗ್ ಸಹಿತ ಇತರ ಪರ್ಯಾಯ ಬಳಕೆಗೆ ಅವರಿಗೆ ಸೂಚನೆ ನೀಡಬೇಕಿದೆ ಎಂದರು.
ಪರಿಸರ ಎಂಜಿನಿಯರ್ ದಯಾನಂದ ಪೂಜಾರಿ ಅವರು ಮಾತನಾಡಿ, ಪ್ಲಾಸ್ಟಿಕ್ ಬಳಕೆ ನಿಯಂತ್ರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಿಯಮಿತವಾಗಿ ನಡೆಯುತ್ತಿದೆ. ಸ್ಟೀಲ್ ಸಹಿತ ಇತರ ಪರ್ಯಾಯ ವ್ಯವಸ್ಥೆ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಬಟ್ಟೆ ಚೀಲ ಪರ್ಯಾಯವಾಗಿ ನೀಡುವಂತೆ ನಗರದ ಅಂಗಡಿಯವರಿಗೆ ಸೂಚನೆ ನೀಡಲಾಗುತ್ತಿದೆ. ಇದನ್ನು ಉಲ್ಲಂಘಿಸಿದ ಅಂಗಡಿ ಮೇಲೆ ದಾಳಿ ನಡೆಸಲಾಗುವುದು. ಎಲ್ಲಾ ಅಂಗಡಿಯವರು ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಮದುವೆ ಮಂಟಪ, ದೇವಸ್ಥಾನ, ಹೊಟೇಲ್ ಸಹಿತ ವಿವಿಧ ಕಡೆಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಯಂತ್ರಿಸುವ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಮೇಯರ್ ಅಧ್ಯಕ್ಷತೆಯಲ್ಲಿ ಶೀಘ್ರ ಕೈಗೊಳ್ಳಲಾಗುವುದು ಎಂದರು.
ಉಪಮೇಯರ್ ಭಾನುಮತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಮಿತ್ರ ಕರಿಯ, ಸರಿತಾ ಶಶಿಧರ್, ಕದ್ರಿ ಮನೋಹರ ಶೆಟ್ಟಿ, ವೀಣಾಮಂಗಳ ಉಪಸ್ಥಿತರಿದ್ದರು.