ಮನೆ ಬಾಗಿಲಿಗೆ ಬಂದ ಲಕ್ಕಿ ಕೂಪನ್​ ನಂಬಿ 7 ಲಕ್ಷ ಕಳಕೊಂಡ ಮಂಡ್ಯ ರೈತ! ಇಲ್ಲಿದೆ ಖತರ್ನಾಕ್​ ವಂಚಕರ ಜಾಲ…

gift
Published on

ಮಂಡ್ಯ: ಹೊಸ ವರ್ಷದ ಆಫರ್​ ಎಂದು ಕಾರಿನ ಆಸೆ ತೋರಿಸಿ ಮಂಡ್ಯ ಜಿಲ್ಲೆಯ ರೈತರೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪಾಂಡವಪುರ ತಾಲೂಕು ಜಕ್ಕನಹಳ್ಳಿ ಗ್ರಾಮದ ರೈತ ಸಂಜೀವ್​ಗೌಡ ಎಂಬುವರು ಹೊಸ ವರ್ಷದ ಆಫರ್​ನಲ್ಲಿ ಮಿಷೋ ಆ್ಯಪ್​ ಮೂಲಕ 2022ರ ನವೆಂಬರ್​ 11ರಿಂದ 2023ರ ಜನವರಿ 1ರವರೆಗೆ ಕೆಲ ವಸ್ತುಗಳನ್ನು ಖರೀದಿಸಿದ್ದರು. ವಸ್ತುಗಳನ್ನು ಖರೀದಿಸಿದ ಕೆಲವೇ ದಿನಗಳಲ್ಲಿ ಸಂಜೀವ್​ಗೌಡರ ಮನೆಗೆ ಸೈಬರ್​ ಖದೀಮರು ಪೋಸ್ಟ್​ ಮೂಲಕ ಒಂದು ಕೂಪನ್​ ಕಳುಹಿಸಿದ್ದಾರೆ. ಆ ಕೂಪನನ್ನು ಸ್ಕ್ರಾಚ್​ ಮಾಡಿ ನೋಡಿದಾಗ ಮಹೇಂದ್ರ ಕಂಪನಿಯ ಎಕ್ಸ್​ಯುವಿ-700 ಕಾರು ಗೆದ್ದಿರುವುದಾಗಿ ಬಿಂಬಿಸಿದ್ದಾರೆ. ಲಕ್ಕಿ ಡ್ರಾದಲ್ಲಿ ನೀವು ಕಾರನ್ನು ಗೆದ್ದಿರುವುದಾಗಿ ಸೈಬರ್​ ಕಳ್ಳರು ಹೇಳಿದ್ದಾರೆ.

ನಿಮಗೆ ಕಾರು ಬೇಕಾ ಅಥವಾ ಹಣ ಬೇಕಾ ಎಂದು ಪ್ರಶ್ನಿಸಿದ್ದಾರೆ. ಹಣ ಬೇಕೆಂದು ಸಂಜೀವ್​ಗೌಡ ತಿಳಿಸಿದಾಗ 29.60 ಲಕ್ಷ ರೂ. ನಕಲಿ ಚೆಕ್​ ಅನ್ನು ವಾಟ್ಸ್​ಆ್ಯಪ್​ ಮೂಲಕ ಕಳುಹಿಸಿದ್ದಾರೆ. ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡಬೇಕಾದರೆ ಸ್ವಲ್ಪ ಹಣ ಖರ್ಚಾಗುತ್ತದೆಂದು ಪುಸಲಾಯಿಸಿದ್ದಾರೆ. ವಂಚಕರ ಮಾತನ್ನು ನಂಬಿ ಮನೆಯಲ್ಲಿದ್ದ ಒಡವೆಗಳನ್ನು ಗಿರವಿ ಇಟ್ಟು ಸೈಬರ್​ ಚೋರರ ಖಾತೆಗೆ ಹಂತ ಹಂತವಾಗಿ 7,23,035 ರೂ. ಹಾಕಿದ್ದಾರೆ. ಪದೇಪದೆ ಹಣ ತೆಗೆದುಕೊಂಡಿದ್ದರಿಂದ ಅನುಮಾನಗೊಂಡ ಸಂಜೀವ್​ಗೌಡ ಅವರು ಮಂಡ್ಯ ಸೈಬರ್​ ಕ್ರೈಂ ಪೊಲೀಸರಿಗೆ ಜ.12ರಂದು ದೂರು ನೀಡಿದ್ದಾರೆ.

ಇತ್ತ ಹಣವೂ ಇಲ್ಲದೆ, ಅತ್ತ ಕಾರು ಸಿಗದೆ ಸಂಜೀವ್​ಗೌಡ ಹಾಗೂ ಅವರ ಪತ್ನಿ ಪರಿತಪಿಸುತ್ತಿದ್ದಾರೆ. ಸೈಬರ್​ ಚೋರರಿಗಾಗಿ ಪೊಲೀಸರು ಶೋಧ ಆರಂಭಿಸಿದ್ದು, ಕೋಲ್ಕತ್ತಾದಿಂದ ಕರೆ ಮಾಡಿ ವಂಚಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net