ಮಾದಪ್ಪನ ಬೆಟ್ಟಕ್ಕೆ ಬ್ರಹ್ಮಚಾರಿಗಳ ಪಾದಯಾತ್ರೆ: ಚಾಲನೆ ನೀಡಿ ಗಂಭೀರ ವಿಚಾರಗಳನ್ನು ತೆರೆದಿಟ್ಟ ನಟ ಧನಂಜಯ್

Actor Dhananjay in Brahmacharigala Padayatra
Published on

ಮಂಡ್ಯ: ಮದುವೆ ಆಗಿಲ್ಲ ಅಂತಾ ಪಾದಯಾತ್ರೆ ನಡೆಸುತ್ತಿರುವುದನ್ನು ಕೇಳಿದ್ದು ಇದೇ ಮೊದಲು. ಸ್ನೇಹಿತರ ವಾಟ್ಸ್​ಆ್ಯಪ್​ ಗ್ರೂಪ್​ಗಳಲ್ಲಿ ಪಾದಯಾತ್ರೆ ವಿಚಾರ ನೋಡಿದಾಗ ತಮಾಷೆ ಎನಿಸಿತು. ಆದರೆ, ಅದರ ಹಿಂದಿನ ಉದ್ದೇಶ ತಿಳಿದಾಗ ನಿಜಕ್ಕೂ ಇದು ಗಂಭೀರ ವಿಚಾರ ಅಂತಾ ಗೊತ್ತಾಯ್ತು ಎಂದು ನಟ ಡಾಲಿ ಧನಂಜಯ್​ ಹೇಳಿದರು.

ಇಂದು (ಫೆ.23) ಬೆಳಗ್ಗೆ ಮಂಡ್ಯದ ಕೆ.ಎಂ. ದೊಡ್ಡಿಯಲ್ಲಿ ಬ್ರಹ್ಮಚಾರಿಗಳ ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ಧನಂಜಯ್​ ಅವರು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದರು.

Photo of Actror Dhananjay

ಪಾದಯಾತ್ರೆಗೆ ಚಾಲನೆ ನೀಡಲು ಬಂದಾಗಲೂ ತಮಾಷೆ ಎನಿಸಿತು. ಪಾದಯಾತ್ರೆ ಯಾಕೆ ಹೊಟಿದ್ದೀರಿ ಅಂತಾ ಕೇಳಿದಾಗ ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ಹೇಳಿದರು. ನಿಜಕ್ಕೂ ಇದು ಗಂಭೀರವಾದ ವಿಚಾರವಾಗಿದೆ. ನಾನು ಕೂಡ ಹಳ್ಳಿಯಿಂದಲೇ ಬಂದಿರುವುದು. ಹಳ್ಳಿಗಳಿಗೆ ಹೋದಾಗ ಯುವಕರನ್ನು ಮಾತನಾಡಿಸುವ ವೇಳೆ ಹೆಣ್ಣು ಸಿಕ್ತಿಲ್ಲ ಎಂದು ಹೇಳುತ್ತಾರೆ. ಇತ್ತೀಚೆಗೆ ಆದಿಚುಂಚನಗಿರಿಯಲ್ಲಿ ವಧು-ವರರ ನೋಂದಣಿಯಲ್ಲಿ ಪಾಲ್ಗೊಂಡಿದ್ದ ಯುವಕರ ಸಂಖ್ಯೆ ನೋಡಿದ್ರೆ ಲಿಂಗಾನುಪಾತ ಎಷ್ಟಿದೆ ಅಂತಾ ಗೊತ್ತಾಗುತ್ತದೆ. ನಾವು ಚಿಕ್ಕವನಿದ್ದಾಗನಿಂದಲೂ ಗಂಡು ಮಕ್ಕಳೇ ಬೇಕು ಅಂತಿದ್ದರು. ಹೆಣ್ಣು ಮಕ್ಕಳು ಹುಟ್ಟಿದರೆ ತಾತ್ಸಾರದಿಂದ ನೋಡುತ್ತಿದ್ದರು. ಆದರೆ, ಅದರ ಫಲಿತಾಂಶ ಈಗ ಗೊತ್ತಾಗುತ್ತಿದೆ ಎಂದರು.

ಹೆಣ್ಣು-ಗಂಡಿನ ನಡುವೆ ಲಿಂಗಾನುಪಾತ ತುಂಬಾ ಏರುಪೇರಾಗಿದೆ ಅನ್ನೋದು ಇದೀಗ ತಿಳಿಯುತ್ತದೆ. ನಗರ ಪ್ರದೇಶಗಳಿಗೆ ಹೆಣ್ಣು ಕೊಡಬೇಕು ಅಂತಾ ಹಳ್ಳಿಗಳಲ್ಲಿ ಯೋಚನೆ ಮಾಡ್ತಾರೆ. ಅದನ್ನು ತಪ್ಪು ಅಂತಾನೂ ಹೇಳುವುದಕ್ಕೆ ಆಗಲ್ಲ. ತಂದೆ, ತಾಯಿ ಹಾಗೂ ಹೆಣ್ಣು ಮಕ್ಕಳಿಗೆ ಅವರದ್ದೇ ಆದ ಕನಸ್ಸುಗಳಿವೆ. ಅದನ್ನೂ ಮೀರಿ ಖಂಡಿತವಾಗಿಯೂ ಇಲ್ಲೊಂದು ಸಮಸ್ಯೆ ಇದೆ ಎಂದು ತಿಳಿಸಿದರು.

ರೈತರಿಗೆ ಹೆಣ್ಣು ಸಿಗಲ್ಲ ಅಂತಾ ಪಾದಯಾತ್ರೆ ಹೊರಟ್ಟಿದ್ದಾರೆ. ಇದು ಕೇವಲ ಪಾದಯಾತ್ರೆ ಮಾತ್ರ ಅಲ್ಲ ಜಾಗೃತಿ ಕಾರ್ಯಕ್ರಮ. ಪಾದಯಾತ್ರೆ ಹೊರಟಿರುವವರು ಮುಂದಿನ ವರ್ಷ ಮದುವೆಯಾಗಿ ಬೆಟ್ಟಕ್ಕೆ ಹೋಗಲಿ ಅಂತ ಶುಭ ಹಾರೈಸುತ್ತೇನೆ. ಗಂಡು ಮಕ್ಕಳೇ ಬೇಕು ಎಂದು ಹೇಳುವ ಮನಸ್ಥಿತಿ ಇಂದಿಗೂ ಇದೆ. ಹೆಣ್ಣು ಮಕ್ಕಳಿಗೆ ತುಂಬಾ ಬೇಡಿಕೆ ಇದೆ. ರೈತರಿಗೆ ತುಂಬಾ ಸಮಸ್ಯೆಗಳಿರುವುದರಿಂದ ಹೆಣ್ಣು ಕೊಡೋದಕ್ಕೆ ಯೋಚನೆ ಮಾಡ್ತಾರೆ. ರೈತರಾಗಿಯೂ ತುಂಬಾ ಚೆನ್ನಾಗಿದೆ ಬದುಕುತ್ತಿರುವವರ ಉದಾಹರಣೆಗಳು ತುಂಬಾ ಇದ್ದಾವೆ ಎಂದು ಹೇಳಿದರು.

ಹಳ್ಳಿಗಳಲ್ಲೂ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಹಾಗಂತ ಯಾರನ್ನೂ ಬಲವಂತ ಮಾಡೋದಕ್ಕೆ ಆಗಲ್ಲ. ಇವನ್ಯಾಕೆ ಸಿನಿಮಾ ಮಾಡ್ತಿದ್ದಾನೆ, ವಾಪಸ್ ಹೋಗು ಅಂದ್ರೆ ಕಷ್ಟ. ನಾನು ಎಲ್ಲೋದ್ರೂ ಮದುವೆ ಯಾವಾಗ ಅಂತ ಕೇಳ್ತಿದ್ದಾರೆ. ನನ್ನ ಮದುವೆಗೂ ಪಾದಯಾತ್ರಿಗಳಿಗೆ ಶುಭ ಹೇಳೋದಕ್ಕೆ ಬಂದಿರುವುದಕ್ಕೂ ಸಂಬಂಧ ಇಲ್ಲ. ಇಲ್ಲಿಗೆ ಬಂದ ಮೇಲೆ ಮದುವೆ ಆದರೆ ಆಗಲಿ. ಮದುವೆಗಾಗಿ ಯಾವುದೇ ಹರಕೆ ಕಟ್ಟಿಕೊಂಡಿಲ್ಲ. ನನಗೆ ಅನಿಸಿದಾಗ ಖಂಡಿತ ಮದುವೆ ಆಗ್ತೀನಿ ಎಂದು ನಟ ಧನಂಜಯ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಟಗರು ಪಲ್ಯ ಚಿತ್ರದ ನಾಯಕ ನಟ ನಾಗಭೂಷಣ ಮಾತನಾಡಿ, ಬ್ರಹ್ಮಚಾರಿಗಳ ಪಾದಯಾತ್ರೆ ಇದೆ ಅಂತ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಮೆಸೇಜ್ ಕಳುಹಿಸಿದರು. ತಮಾಷೆ ಅಂತ ಅನಿಸಿದರೂ ನಮಗೆ ನಾವೇ ನೋಡಿಕೊಂಡಾಗ ಅದು ನಿಜ ಅನಿಸುತ್ತದೆ. ಉದಾಹರಣೆಗೆ ಯಾರೋ ಯಾಕೆ ನಾನೇ ಇದ್ದೀನಿ. ರೈತರಿಗಷ್ಟೇ ಅಲ್ಲ ಸಿನಿಮಾದವರಿಗೂ ಹೆಣ್ಣು ಕೊಡುವುದಿಲ್ಲ. ಹೆಣ್ಣಿನ ಕಷ್ಟ ಹೆಣ್ಣೇ ಅರ್ಥ ಮಾಡಿಕೊಳ್ಳಬೇಕು ಅಂತಾರೆ. ಹಾಗೆಯೇ ಬ್ರಹ್ಮಚಾರಿಗಳ ಕಷ್ಟ ಬ್ರಹ್ಮಚಾರಿಗಳೇ ಅರ್ಥ ಮಾಡಿಕೊಳ್ಳಬೇಕು ಅದಕ್ಕಾಗಿ ಬಂದಿದ್ದೇವೆ ಎಂದರು.

Photo of Actror Dhananjay

ಸಿಟಿಯಲ್ಲಿ ಸಣ್ಣ ಕೆಲಸ ಮಾಡಿದ್ರೂ ಹೆಣ್ಣು ಕೊಡ್ತಾರೆ. ರೈತರಿಗೆ ಹತ್ತು ಹದಿನೈದು ಎಕರೆ ಜಮೀನು ಇದ್ರೂ ಹೆಣ್ಣು ಕೊಡಲ್ಲ. ಯಾಕೆ ಅಂತ ಎಲ್ಲರೂ ವಿಮರ್ಶೆ ಮಾಡಿಕೊಳ್ಳಬೇಕು. ರೈತ ಯುವಕರು ಎಷ್ಟು ಜನ ಅವರ ಅಕ್ಕ-ತಂಗಿಯರನ್ನು ರೈತರಿಗೆ ಕೊಟ್ಟಿದ್ದಾರೆ ಅಂತಾನೂ ಪ್ರಶ್ನೆ ಮಾಡಿಕೊಳ್ಳಬೇಕಾಗುತ್ತದೆ. ಎಲ್ಲರಿಗೂ ಹೆಣ್ಣು ಸಿಕ್ಕರೆ ಸಾಕು, ಅದೇ ರೀತಿ ನನಗೂ ಸಿಕ್ಕರೆ ಖುಷಿ. ಸಿನಿಮಾದವರಿಗೆ ಹೆಣ್ಣು ಮಾತ್ರವಲ್ಲ, ಬಾಡಿಗೆಗೆ ಮನೆಯನ್ನೇ ಕೊಡಲ್ಲ. ಬ್ಯಾಂಕ್​​ಗಳಲ್ಲಿ ಸಾಲವನ್ನೂ ಕೊಡುವುದಿಲ್ಲ ಎಂದು ನಾಗಭೂಷಣ ಬೇಸರ ಹೊರಹಾಕಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net