ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಮಳೆಗಾಲದ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆ ಆರಂಭಗೊಂಡಿವೆ. ಜೂನ್ 15ರಿಂದ ಎರಡು ಮೇಳಗಳಿಂದ ಪ್ರದರ್ಶನ ನಡೆಯಲಿದೆ.
ಮಂದಾರ್ತಿ ಅಮ್ಮನವರ ಹರಕೆ ಸೇವೆಯಾಗಿ ಆರು ತಿಂಗಳ ಕಾಲ ಐದು ಮೇಳಗಳಿಂದ ಯಕ್ಷಗಾನ ಪ್ರದರ್ಶನ ನಡೆಯುತ್ತದೆ. ಈ ಸೇವೆಯಾಟಗಳು ಇನ್ನೂ 20 ವರ್ಷದವರೆಗೆ (2045-46) ಬುಕ್ಕಿಂಗ್ ಆಗಿವೆ. ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಸೇವೆ ಪೂರೈಸುವ ದೃಷ್ಟಿಯಿಂದ ಎಂಟು ವರ್ಷದಿಂದ ಪ್ರಾರಂಭಿಸಲಾದ ಮಳೆಗಾಲದ ಪ್ರದರ್ಶನವು ಮುಂದಿನ ನಾಲ್ಕು ವರ್ಷಗಳವರೆಗೆ ಬುಕ್ ಆಗಿದೆ.
21,000 ಆಟ ನೋಂದಣಿ
ಶ್ರೀ ಕ್ಷೇತ್ರದಲ್ಲಿ ಅಂದಾಜು 21,000 ಆಟಗಳು ಹರಕೆ ರೂಪದಲ್ಲಿ ನೋಂದಣಿಯಾಗಿವೆ. ಐದು ದಶಾವತಾರ ಮೇಳಗಳು ಅಂದಾಜು 6 ತಿಂಗಳ ಕಾಲ ಕರಾವಳಿ, ಮಲೆನಾಡಿನ ವಿವಿಧೆಡೆ ಸಂಚಾರ ನಡೆಸಿ 28 ಕಟ್ಟುಕಟ್ಟಳೆ ಆಟ ಸೇರಿದಂತೆ ವರ್ಷಕ್ಕೆ 945 ಸೇವೆಗಳನ್ನು ಪೂರೈಸುತ್ತವೆ. ಒಂದು ಮೇಳದಲ್ಲಿ 42 ಕಲಾವಿದರು ಸೇವೆ ಸಲ್ಲಿಸುತ್ತಿದ್ದಾರೆ.
ಯಕ್ಷಗಾನ ಸೇವೆಗಳನ್ನು ಆದಷ್ಟು ಶ್ರೀದಲ್ಲಿ ಸಲ್ಲಿಸಲು ಅನುಕೂಲ ವಾಡಿಕೊಡುವ ದೃಷ್ಟಿಯಿಂದ 8 ವರ್ಷಗಳಿಂದ ಎರಡು ಮೇಳಗಳಿಂದ ಮಳೆಗಾಲದಲ್ಲಿ ಪ್ರದರ್ಶನ ಪ್ರಾರಂಭಿಸಲಾಯಿತು. ಕೇತ್ರದ ಕಲ್ಯಾಣ ಮಂಟಪದಲ್ಲಿ ಪ್ರತಿನಿತ್ಯ ಸಂಜೆ 7ರಿಂದ ರಾತ್ರಿ 1.30ರ ತನಕ ಸೇವೆ ನಡೆದು 275 ಆಟ ಪೂರ್ಣಗೊಳ್ಳುತ್ತದೆ.
ಮಳೆಗಾಲದ ಸೇವೆಯ ಏಕೈಕ ಕ್ಷೇತ್ರ
ಉಡುಪಿ, ದ.ಕ. ಸೇರಿದಂತೆ ರಾಜ್ಯಾದ್ಯಂತ 40ರಷ್ಟು ಯಕ್ಷಗಾನ ಮೇಳಗಳಿದ್ದರೂ ಮಳೆಗಾಲದಲ್ಲಿ ಸೇವೆ ಆಟ ನಡೆಯುವ ಏಕೈಕ ಕ್ಷೇತ್ರ ಮಂದಾರ್ತಿ ಎಂಬ ಹೆಗ್ಗಳಿಕೆ ಇದೆ.
ಯಕ್ಷಗಾನ ತರಬೇತಿ
ಪ್ರತಿ ವರ್ಷದಂತೆ ಮಳೆಗಾಲದಲ್ಲಿ ಯಕ್ಷಗಾನ ತರಬೇತಿ ಶಿಬಿರ ನಡೆಯಲಿದೆ. ಭಾಗವತಿಕೆ, ಚಂಡೆ, ಮದ್ದಳೆ, ಹೆಜ್ಜೆಗಾರಿಕೆ ತರಗತಿಗಳು ನಡೆಯಲಿದೆ. ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವಿರಲಿದೆ.
ಪ್ರಥಮ ದೇವರ ಸೇವೆ ಆಟ
ಜೂನ್ 15ರಂದು ಪ್ರಥಮ ದೇವರ ಸೇವೆ ಆಟದೊಂದಿಗೆ ಮಳೆಗಾಲದ ಪ್ರದರ್ಶನ ಆರಂಭಗೊಳ್ಳಲಿದೆ. ಬೆಳಗ್ಗೆ ಬಾರಾಳಿ ಶ್ರಿ ಗಣಪತಿ ದೇವಸ್ಥಾನದಲ್ಲಿ ಗಣಪತಿ ಹೋಮ, ಕ್ಷೇತ್ರದಲ್ಲಿ ಗಣಪತಿ ಹೋಮ, ಗಣಪತಿ ಪೂಜೆ, ಸಂಜೆ ಬಾರಾಳಿಯಲ್ಲಿ ಗೆಜ್ಜೆಧಾರಣೆ, ಚೌಕಿಯಲ್ಲಿ ಗಣಪತಿ ಪೂಜೆಯಾಗಿ ನಂತರ ಸೇವೆಯಾಟ ನಡೆಯಲಿದೆ.
ಭಕ್ತರ ಸೇವೆ ಆದಷ್ಟು ಶ್ರೀದಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮಳೆಗಾಲದಲ್ಲಿ ಎರಡು ಮೇಳಗಳಿಂದ ಆಟ ಪ್ರಾರಂಭಿಸಲಾಯಿತು. ಮಳೆಗಾಲ ಆಟವೂ 2045ರ ವರೆಗೆ ನೋಂದಣಿಯಾಗುವುದರಿಂದ ಯಕ್ಷಗಾನ ಪ್ರದರ್ಶನಕ್ಕೆಂದೇ ನೂತನ ಸಭಾಂಗಣ ರಚಿಸಿ ಮಳೆಗಾಲದ ಮೇಳಗಳ ಸಂಖ್ಯೆ ಹೆಚ್ಚಿಸುವ ಕುರಿತು ಚಿಂತನೆ ನಡೆದಿದೆ.
ಎಚ್.ಧನಂಜಯ ಶೆಟ್ಟಿ, ಮಂದಾರ್ತಿ ದೇವಸ್ಥಾನ, ಅಧ್ಯಕ್ಷ