

ವಿಜಯವಾಣಿ ಸುದ್ದಿಜಾಲ ಉಡುಪಿ
ಚತುರ್ಥ ಪರ್ಯಾಯ ಸೇವೆಯಲ್ಲಿ ನಿರತ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಹಾಗೂ ವಿಶಿಷ್ಟವಾಗಿ ಆಯೋಜಿಸಲು ಸಂಕಲ್ಪ ಮಾಡಿದ್ದು, ಆಗಸ್ಟ್ 1ರಿಂದ 48 ದಿನಗಳ ಕಾಲ ಮಂಡಲೋತ್ಸವ ನಡೆಯಲಿದೆ.
ಮಂಡಲೋತ್ಸವದ ಎಲ್ಲ ಕಾರ್ಯಕ್ರಮಗಳೂ ರಾಜಾಂಗಣದ ದರ್ಬಾರ್ ವೇದಿಕೆಯಲ್ಲಿ ಆಯೋಜಿಸಲಾಗಿದ್ದು, ಆ.1ರಂದು ಬೆಳಗ್ಗೆ 6 ಗಂಟೆಗೆ ಅರುಣೋದಯ ಕಾಲದಲ್ಲಿ ಸುಗುಣೇಂದ್ರ ಶ್ರೀಗಳು ಸ್ವಾಮಿ ಶ್ರೀಕೃಷ್ಣಾಯ ನಮ: ಎಂಬ ಮಂತ್ರೋಪದೇಶದೊಂದಿಗೆ ಚಾಲನೆ ನೀಡಲಿದ್ದಾರೆ. ಕಿರಿಯ ಶಿಷ್ಯ ಸುಶ್ರೀಂದ್ರ ಶ್ರೀ ಸಾನ್ನಿಧ್ಯ ವಹಿಸಲಿದ್ದಾರೆ.
ವಿವಿಧ ಯೋಗ ಸಂಸ್ಥೆಗಳ ಯೋಗಾರ್ಥಿಗಳಿಂದ 48 ಸೂರ್ಯ ನಮಸ್ಕಾರ ಹಾಗೂ ಮಂಡಲೋತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಂದ 108 ಬಾರಿ ಸಾಮೂಹಿಕವಾಗಿ ಶ್ರೀಕೃಷ್ಣ ಮಂತ್ರ ಪಠಣ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಮಧ್ವ ಮಂಟಪದಲ್ಲಿ ವಿಶೇಷ ಭಜನಾ ಮಂಡಲೋತ್ಸವ ನಡೆಯಲಿದೆ.
ಜನ್ಮಾಷ್ಟಮಿ ನಿಮಿತ್ತ ವೇಣು ಮಂಡಲೋತ್ಸವ, ಜ್ಜಾನ ಮಂಡಲೋತ್ಸವ ಹಾಗೂ ಸಾಂಸ್ಕೃತಿಕ ಮಂಡಲೋತ್ಸವ ಕಾರ್ಯಕ್ರಮ ನಡೆಯಲಿದ್ದು, ಆ.1ರಂದು ಸಂಜೆ 5 ಗಂಟೆಗೆ ಶ್ರೀಗಳ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್, ನಗರಸಭಾ ಆಯುಕ್ತ ಮಹಾಂತೇಶ ಹಂಗರಗಿ, ತು.ಶಿ.ಮಾ.ಮ. ಮಾಜಿ ಅಧ್ಯಕ್ಷ ಅರವಿಂದ ಆಚಾರ್ಯ ಇತರರು ಪಾಲ್ಗೊಳ್ಳಲಿದ್ದಾರೆ.